ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ನೇಮಕಾತಿಗೆ ಮಂಗಳವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಎರಡನೇ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತವಾಗಿದ್ದ ಕೆಲವು ಪ್ರಶ್ನೆಗಳು ಏನೆಂದೂ ಗೊತ್ತಾಗದೇ ಪರೀಕ್ಷಾರ್ಥಿಗಳು ಕಕ್ಕಾಬಿಕ್ಕಿಯಾದರು. ಇಂಗ್ಲಿಷ್ ಪ್ರಶ್ನೆಗಳನ್ನು ಎಐ ತಂತ್ರಜ್ಞಾನದ ನೆರವಿನಿಂದ ಭಾಷಾಂತರಿಸಿದಂತೆ ಇದೆ.
ಕನ್ನಡ ಮಾಧ್ಯಮದ ಅನೇಕ ಅಭ್ಯರ್ಥಿಗಳು ಪ್ರಶ್ನೆಗಳನ್ನು ಓದಿ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವರು ಇಂಗ್ಲಿಷ್ನಲ್ಲಿದ್ದ ಪ್ರಶ್ನೆಗಳನ್ನು ಓದಿ ಉತ್ತರವನ್ನು ಬರೆದಿದ್ದೂ ನಡೆದಿದೆ. ಅರ್ಥವಾಗದೇ ಇದ್ದ ಕನ್ನಡದ ಬಳಕೆಯ ವಿಧಾನದಿಂದ ಸಿಟ್ಟಿಗೆದ್ದ ಗ್ರಾಮೀಣ ಭಾಗದ ಅನೇಕ ಅಭ್ಯರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ಅಲವತ್ತುಕೊಂಡರು.
ಈ ವಿಚಾರದ ಬಗ್ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೋಕಸೇವಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶ್ನೆ ಪತ್ರಿಕೆಯನ್ನು ಗೂಗಲ್ ನಲ್ಲಿ ಅನುವಾದ ಮಾಡಿಸೋ ಮಟ್ಟಕ್ಕೆ ಲೋಕಸೇವಾ ಆಯೋಗ ಇಳಿದಿದೆ. ಒಬ್ಬ ಉತ್ತಮ ತರ್ಜುಮೆದಾರರ ಮೂಲಕ ಅನುವಾದ ಮಾಡಿಸಿಕೊಳ್ಳಲು ಏನು ಸಮಸ್ಯೆ? ಆಯೋಗಕ್ಕೆ ತಮ್ಮ ಸ್ವಂತ ಸಿಬ್ಬಂದಿ, ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲವೇ?
ಈ ರೀತಿಯಾದ ತಪ್ಪು ತರ್ಜುಮೆಯಿಂದ ಪರೀಕ್ಷಾರ್ಥಿಗಳು ಗೊಂದಲಗೊಂಡು ಸಮಯ ವ್ಯರ್ಥವಾಗುವುದಿಲ್ಲವೇ? ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರತಿ ನಿಮಿಷ, ಸೆಕೆಂಡ್ ಕೂಡ ಮುಖ್ಯವಾಗುತ್ತೆ. ಇಂತಹುದ್ದರಲ್ಲಿ, ತಪ್ಪು ತರ್ಜುಮೆ ಮಾಡಿ ಕೊಟ್ಟರೆ ಪರೀಕ್ಷಾರ್ಥಿಗಳ ಸಮಯ ಹಾಳಾಗುವುದಿಲ್ಲವೇ? ಪ್ರಶ್ನೆ ಪತ್ರಿಕೆ ಮಾಡಿದ ನಂತರ ಅದನ್ನು ಪ್ರೂಫ್ ಮಾಡುವ ಅಭ್ಯಾಸ/ವ್ಯವಸ್ಥೆ ಇಲ್ಲವೇ? ಎಂದು ಹಲವಾರು ಪ್ರಶ್ನೆಗಳನ್ನ ತಮ್ಮ ಎಕ್ಸ್ ಖಾತೆಯಲ್ಲಿ ಕೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.