384 ಗೆಜೆಟೆಡ್ ಪ್ರೊಬೇಷನರ್ಹುದ್ದೆಗಳ ನೇಮಕಾತಿಗೆ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಯಲ್ಲಿನ ಪ್ರಶ್ನೆ ಪತ್ರಿಕೆಯಲ್ಲಿ ಸಾಲು ಸಾಲು ಲೋಪ- ದೋಷಗಳನ್ನು ಪತ್ತೆಹಚ್ಚಿರುವ ಅಭ್ಯರ್ಥಿಗಳು ಕೆಪಿಎಸ್ಸಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಒಂದೇ ಪ್ರಶ್ನೆಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಬೇರೆ ಬೇರೆ ಅರ್ಥ ಬರುವಂತೆ ಬರೆದಿರುವುದು, ಇಸವಿಯಲ್ಲಿ ಲೋಪ, ಪುನರಾವರ್ತನೆ, ವಾಕ್ಯ ರಚನೆಯಲ್ಲಿ ಲೋಪ, ಗೊಂದಲ ಮತ್ತು ಅಸಂಬದ್ಧ ವಾಕ್ಯ ರಚನೆ, ತದ್ವಿರುದ್ಧ ಅರ್ಥ ಬರುವಂತೆ ಅನುವಾದ ಮಾಡಿರುವುದು ಸೇರಿದಂತೆ ಅನೇಕ ಗೊಂದಲಗಳು ಪ್ರಶ್ನೆಪತ್ರಿಕೆಯಲ್ಲಿ ಕಂಡುಬಂದಿವೆ.
ಕೆಪಿಎಸ್ಸಿ ಇತಿಹಾಸದಲ್ಲೇ ಇಷ್ಟು ಕೆಟ್ಟದಾಗಿ ಪತ್ರಿಕೆಯನ್ನು ಸಿದ್ಧಪಡಿಸಿರಲಿಲ್ಲ. ಸುಮಾರು 6 ತಿಂಗಳಿಗೂ ಹೆಚ್ಚು ಕಾಲಾವಕಾಶ ಇದ್ದರೂ ತಪ್ಪು ಮಾಡಿರಿವುದು ಅಕ್ಷಮ್ಯ, ಕೆಎಎಸ್ ನೇಮಕಾತಿ ಮಾಡುವುದನ್ನು ಕೆಪಿಎಸ್ಸಿ ನಿಲ್ಲಿಸಬೇಕು ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಲೋಪಗಳಾಗಿದ್ದರೂ ಕಾರಣಗಳು ಏನು ಎಂಬುದರ ಕುರಿತು ಸ್ಪಷ್ಟನೆ ನೀಡದೆ ಕೆಪಿಎಸ್ಸಿ ಮೌನಕ್ಕೆ ಜಾರಿದೆ.