ಕರ್ನಾಟಕದಲ್ಲಿ ಎಚ್1ಎನ್1 ಪ್ರಕರಣಗಳ ಸಂಖ್ಯೆ ಈ ವರ್ಷ ಕಳೆದ ವರ್ಷಕ್ಕೆ ಹೋಲಿಸಿದರೆ ಏಳು ಪಟ್ಟು ಹೆಚ್ಚಾಗಿದೆ ಎಂಬುದು ಆರೋಗ್ಯ ಇಲಾಖೆಯ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ವರ್ಷ ಜುಲೈ 31 ರವರೆಗೆ ರಾಜ್ಯಾದ್ಯಂತ 855 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಜುಲೈ ವೇಳೆಗೆ ರಾಜ್ಯಾದ್ಯಂತ 118 ಪ್ರಕರಣಗಳು ವರದಿಯಾಗಿದ್ದವು.
ಈ ವರ್ಷ ಎಚ್1ಎನ್1 ಸೋಂಕಿನಿಂದಾಗಿ ಮೈಸೂರಿನಲ್ಲಿ 15 ವರ್ಷದ ಹುಡುಗ ಮತ್ತು ದೊಡ್ಡಬಳ್ಳಾಪುರದಲ್ಲಿ 48 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ವೈರಸ್ ಪರೀಕ್ಷೆ ಮಾಡಿಸಿ ಪಾಟಿಸಿವ್ ಬಂದ ಮೂವರು ಇತರೆ ರೋಗಗಳು ಮತ್ತು ವಯಸ್ಸಿನ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.