ಗೆಜೆಟೆಡ್ ಪ್ರೊಬೇಷನರ್ ನೇಮಕಾತಿ ಪೂರ್ವಭಾವಿ ಪರೀಕ್ಷೆ ಅನೇಕ ದೋಷಗಳಿಂದ ಕೂಡಿದ್ದರಿಂದ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲು ಬೇಕಾದ ʻಕಟ್ಆಫ್ʼ ಅಂಕ ಕಡಿಮೆ ಯಾಗುವ ಸಾಧ್ಯತೆಯಿದೆ. ಬಿಡುಗಡೆ ಆಗಿರುವ ಕೀ ಉತ್ತರಗಳ ಆಧಾರದ ಮೇಲೆ ಅಭ್ಯರ್ಥಿಗಳು ಪಡೆದಿರುವ ಅಂಕಗಳನ್ನು ಅನೇಕ ತರಬೇತಿ ಕೇಂದ್ರಗಳು, ಬೋಧಕರು, ಉಪನ್ಯಾಸಕರು, ತಜ್ಞರು ವಿಶ್ಲೇಷಣೆ ನಡೆಸಿದಾಗ ಕಟ್ ಆಫ್ ಅಂಕಗಳು 150-160ಕ್ಕೆ ಇಳಿಕೆಯಾಗಬಹುದು ಎನ್ನಲಾಗಿದೆ. ಹೀಗಾಗಿ, 150-160ರ ಅಸು ಪಾಸು ಅಂಕಗಳಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅವಕಾಶ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಉಳಿದಂತೆ ಬೇರೆ ವರ್ಗಗಳಿಗೆ ಕಟ್ ಆಫ್ ಅಂಕಗಳು ಮತ್ತಷ್ಟು ಕಡಿಮೆ ಆಗುತ್ತವೆ ಎಂದು ವಿಶ್ಲೇಷಿಸಲಾಗಿದೆ. ತಲಾ 200 ಅಂಕಗಳ 2 ಪತ್ರಿಕೆಗಳಿಗೆ ಒಟ್ಟು 400 ಅಂಕಗಳ ಪೂರ್ವಭಾವಿ ಪರೀಕ್ಷೆ ನಡೆದಿದೆ. 2017-18ರಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳ ಕಟ್ ಆಫ್ ಅಂಕ 200 ಇದ್ದರೆ, 2015ರಲ್ಲಿ 184 ಇತ್ತು. ಪ್ರತಿ ಬಾರಿ ಅರ್ಜಿ ಸಲ್ಲಿಸು ವವರ ಸಂಖ್ಯೆ ಹೆಚ್ಚಳ ಹಾಗೂ ಸ್ಪರ್ಧೆ ಹೆಚ್ಚಾಗುವ ಕಾರಣ ಕಟ್ ಆಫ್ ಹೆಚ್ಚಳವಾಗುವುದು ಸಹಜ. ಆದರೆ, ಈ ಬಾರಿ ಕೆಪಿಎಸ್ಸಿ ಪ್ರಶ್ನೆ ಪತ್ರಿಕೆಗಳು ಲೋಪ ದೋಷಗಳಿಂದ ಕೂಡಿದ ಕಾರಣ ಇಳಿಮುಖವಾಗಿದೆ. ಅನೇಕರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾಷಾಂತರ, ವಾಸ್ತವಾಂಶಗಳಲ್ಲಿ ತಪ್ಪುಗಳು ಆಗಿರುವ ಕಾರಣ ಅನೇಕರು ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸುತ್ತಿದ್ದಾರೆ. ಆಕ್ಷೇಪಣೆಗಳನ್ನು ಪರಿಗಣಿಸಿದರೆ ಕೃಪಾಂಕ ಸಾಧ್ಯತೆಯಿದೆ.