ಐಸಿಸಿ ಒನ್ ಡೇ Ranking ಪಟ್ಟಿಯಲ್ಲಿ ಶುಭಮನ್ ಗಿಲ್ ನಂ.1 ಸ್ಥಾನಕ್ಕೇರಿದ್ದಾರೆ. ಈಗ ಇರುವ ಆಟಗಾರರಲ್ಲಿ ಒನ್ ಡೇ ಕ್ರಿಕೆಟ್ಟಿನಲ್ಲಿ ನಂ.1 ಸ್ಥಾನಕ್ಕೇರಿದ 2ನೇ ಭಾರತೀಯ ಶುಭಮನ್ ಗಿಲ್. ಸದ್ಯದಲ್ಲಿ ಭಾರತ ತಂಡದಲ್ಲಿ ಆಡುತ್ತಿರುವ ಆಟಗಾರರಲ್ಲಿ ನಂ.1 ಆಟಗಾರ ವಿರಾಟ್ ಕೊಹ್ಲಿ. 796 ರೇಟಿಂಗ್ ಪಾಯಿಂಟ್ಸ್ ಗಳನ್ನು ಕಲೆ ಹಾಕಿರುವ ಶುಭಮನ್ ಗಿಲ್ , ಪಾಕಿಸ್ತಾನದ ಬಾಬರ್ ಅಜಂರನ್ನು ಹಿಂದಿಕ್ಕಿದ್ದಾರೆ. 773 ರೇಟಿಂಗ್ ಅಂಕಗಳನ್ನು ಹೊಂದಿರುವ ಪಾಕಿಸ್ತಾನದ ಸ್ಟಾಬ್ಬರುರ್ ಬ್ಯಾಟರ್ ಅನ್ನು 2ನೇ ಸ್ಥಾನಕ್ಕೆ ತಳ್ಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ ಒಂದು ಸೆಂಚುರಿ ಹಾಗೂ 2 ಅರ್ಧ ಶತಕ ದಾಖಲಿಸಿದ್ದ ಶುಭಮನ್ ಗಿಲ್, ಪ್ರಚಂಡ ಫಾರ್ಮ್ ಕಂಡು ಕೊಂಡಿದ್ದರು. ಒಟ್ಟು 259 ರನ್ ಕಲೆ ಹಾಕಿದ್ದರು. ಅರ್ಹವಾಗಿಯೇ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿಯಿತು. ಅಂತಿಮ ಪಂದ್ಯದಲ್ಲಿ 112 ರನ್ ಚಚ್ಚಿದ್ದಕ್ಕಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿಯುತು. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರಥಮ ಪಂದ್ಯಕ್ಕೂ ಮೊಜಲೇ ಅವರು ನಂಬರ್ 1ನೇ ಸ್ಥಾನಕ್ಕೇರಿದ್ದಾರೆ.
ಇನ್ನು 761 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಥಾನ ಅಬಾಧಿತವಾಗಿದೆ. ರೋಹಿತ್ ಶರ್ಮಾ ಕೂಡಾ ನೀರಸ ಪ್ರದರ್ಶನದಿಂದ ಹೊರಬಂದು ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು.
ಅರ್ಧ ಶತಕ ದಾಖಲಿಸಿ ಕಳಪೆ ಫಾರ್ಮಿಂದ ಹೊರಬಂದಿದ್ದ ವಿರಾಟ್ ಕೊಹ್ಲಿ 6ನೇ ಸ್ಥಾನದಲ್ಲಿದ್ದು, ಸರಣಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಶ್ರೇಯಸ್ ಅಯ್ಯರ್ 9ನೇ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ವಿಕೆಟ್ ಕೀಪರ್ ಬ್ಯಾಟರ್ ಎಂದರೆ ಕೆಎಲ್ ರಾಹುಲ್ ಅವರು 16ನೇ ಸ್ಥಾನದಲ್ಲಿದ್ದಾರೆ.
ಇನ್ನು ಟೀಂ ಅಂಕಪಟ್ಟಿಯಲ್ಲಿ 119 ರೇಟಿಂಗ್ ಪಾಯಿಂಟ್ ಹೊಂದಿರುವ ಭಾರತವೇ ನಂಬರ್ 1 ಸ್ಥಾನದಲ್ಲಿ ಮುಂದುವರೆದಿದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಆಸ್ಟ್ರೇಲಿಯಾ (110 ರೇಟಿಂಗ್ ಅಂಕ), ಪಾಕಿಸ್ತಾನ (108 ರೇಟಿಂಗ್ ಅಂಕ), ನ್ಯೂಜಿಲೆಂಡ್ (104 ರೇಟಿಂಗ್ ಅಂಕ) ಮತ್ತು ಶ್ರೀಲಂಕಾ (99 ರೇಟಿಂಗ್ ಅಂಕ) ತಂಡಗಳಿವೆ.
ಇನ್ನು ಬೌಲರುಗಳಲ್ಲಿ ಕುಲದೀಪ್ ಯಾದವ್ 4ನೇ ಸ್ಥಾನದಲ್ಲಿದ್ದರೆ, ಮಹಮ್ಮದ್ ಸಿರಾಜ್ 10ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ 13ನೇ ಸ್ಥಾನದಲ್ಲಿದ್ದಾರೆ.
ಏಕದಿನ ಆಲ್ ರೌಂಡರ್ ಪಟ್ಟಿಯ ಟಾಪ್ 10 ನಲ್ಲಿ ರವೀಂದ್ರ ಜಡೇಜಾ ಹೊರತು ಪಡಿಸಿ ಬೇರಾರೂ ಇಲ್ಲ. ಒಂದನೇ ಸ್ಥಾನದಲ್ಲಿ 300 ರೇಟಿಂಗ್ ಹೊಂದಿರುವ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಇದ್ದಾರೆ. 2ನೇ ಸ್ಥಾನದಲ್ಲಿ. ಜಿಂಬಾಬ್ವೆಯ ಸಿಕಂದರ್ ರಾಜಾ, 3ನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ಅಜ್ಮತುಲ್ಲಾ ಒಮರಜೈ, 4ನೇ ಸ್ಥಾನದಲ್ಲಿ ಬಾಂಗ್ಲಾದೇಶದ ಮೆಹಿದಿ ಹಸನ್ ಮಿರಾಜ್, 5ನೇ ಸ್ಥಾನದಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಇದ್ದಾರೆ.
ಚಾಂಪಿಯನ್ಸ್ ಟ್ರೋಫಿ ಶುರುವಾಗುವ ಮುನ್ನ ಬಂದಿರುವ ICC Ranking ಪಟ್ಟಿಯಲ್ಲಿ ಭಾರತದ ನಾಲ್ವರು ಬ್ಯಾಟ್ಸ್ಮನ್ನುಗಳು ಟಾಪ್ 10ನಲ್ಲಿದ್ದರೆ, ಬೌಲರುಗಳಲ್ಲಿ ಮೂವರಿದ್ದಾರೆ. ಟೀಂ ಇಂಡಿಯಾ ನಂ.1 ಸ್ಥಾನದಲ್ಲಿದೆ. ಇದೆಲ್ಲವೂ ಶುಭ ಸೂಚನೆಯಾಗಿದ್ದು, ಭಾರತ ಚಾಂಪಿಯನ್ ಆಗುವುದು ಬಹುತೇಕ ಖಚಿತ ಎನ್ನುತ್ತಿದ್ದಾರೆ ಕ್ರಿಕೆಟ್ ಫ್ಯಾನ್ಸ್.