ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಡೆಂಗ್ಯೂ ಅಬ್ಬರ ಜೋರಾಗಿದ್ದು, ರಾಜ್ಯದ ವಿವಿಧೆಡೆ ಸಾವುಗಳು ಕೂಡ ಸಂಭವಿಸುತ್ತಿದೆ. ಹಿಂದಿನ ಕಳೆದ ಕೆಲವು ವರ್ಷಗಳಿಗಿಂತ ಈ ಬಾರಿ ಡೆಂಗ್ಯೂ ಜ್ವರ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ.
ಈ ಹಿನ್ನೆಲೆಯಲ್ಲಿ ಡೆಂಗ್ಯೂ ಪ್ರಕರಣಗಳ ಹೆಚ್ಚಳದಿಂದಾಗಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಡೆಂಗ್ಯೂವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೆಲವು ನಿಯಮಗಳನ್ನು ಜಾರಿಗೊಳಿಸಿದೆ.
ರಾಜ್ಯ ಸರ್ಕಾರದ ಹೊಸ ಸೂಚನೆ ಈ ಕೆಳಗಿನಂತಿದೆ.
• ಎಲ್ಲಾ ಭೂಮಾಲೀಕರು, ಒತ್ತುವರಿದಾರರು ಮತ್ತು ಬಿಲ್ಡರ್ಗಳು ತಮ್ಮ ಆವರಣದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
• ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಅಧಿಕಾರಿಗಳು ಖಾಲಿ ಸ್ಥಳಗಳು, ಕಟ್ಟಡಗಳು, ನೀರಿನ ಟ್ಯಾಂಕ್ಗಳು, ಉದ್ಯಾನವನಗಳು ಮತ್ತು ಆಟದ ಮೈದಾನಗಳನ್ನು ನಿಯಮಿತವಾಗಿ ತಪಾಸಣೆಗಳನ್ನು ನಡೆಸುತ್ತಾರೆ.
• ಸೊಳ್ಳೆ ತಡೆಗಟ್ಟುವ ಕ್ರಮಗಳನ್ನು ಅನುಸರಿಸಲು ವಿಫಲವಾದರೆ ಸಕ್ಷಮ ಪ್ರಾಧಿಕಾರದಿಂದ ದಂಡ ವಿಧಿಸಲಾಗುತ್ತದೆ. ಸರ್ಕಾರದ ಈ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಅನುಸರಿಸಲು ಮತ್ತು ಡೆಂಗ್ಯೂ ಹರಡುವಿಕೆಯನ್ನು ನಿಯಂತ್ರಿಸಲು ನಮ್ಮೊಂದಿಗೆ ಸಹಕರಿಸಬೇಕು ಈ ಮಹಾಮಾರಿಯನ್ನು ತೊಲಗಿಸುವಲ್ಲಿ ನಿಮ್ಮ ಸಹಕಾರ ಬಹುಮುಖ್ಯ. ಡೆಂಗ್ಯೂ ತಡೆಗೆ ಒಟ್ಟಾಗಿ ಕೆಲಸ ಮಾಡೋಣ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.