ರಾಜ್ಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮುಡಾ ಹಗರಣ ರಾಷ್ಟ್ರವ್ಯಾಪಿ ಹಬ್ಬಲು ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮುಡಾ ಪ್ರಕರಣವನ್ನು ದೆಹಲಿಗೆ ತಲುಪಿಸಿದ್ದಾರೆ. ಮುಡಾ ಹಗರಣ ಕಾಂಗ್ರೆಸ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಸಾಕಷ್ಟು ಸಂಕಷ್ಟ ತಂದಿಟ್ಟಿದೆ. ಇನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ ನೀಡಿರುವ ನಿರ್ಧಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟ ನಡೆಸಿದ್ದಾರೆ. ಇದರ ಮಧ್ಯ ಇದೀಗ ಮುಡಾ ಹಗರಣ ರಾಷ್ಟ್ರಪತಿ ಅಂಗಳ ತಲುಪಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಡಾ ಹಗರಣದ ವಿಚಾರವಾಗಿ ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ರಾಜ್ಯ ಸರ್ಕಾರ, ರಾಜಭವನದ ಮೇಲೆ ನಿರಂತರ ಒತ್ತಡ ಹಾಕುತ್ತಿದೆ. ಹೀಗೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ರಾಷ್ಟ್ರಪತಿಗೆ ಮಾಹಿತಿ ರವಾನಸಿದ್ದಾರೆ. ಅಲ್ಲದೇ ಕೇಂದ್ರ ಗೃಹ ಸಚಿವಾಲಯಕ್ಕೂ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸಿಗರು ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಸಾರ್ವಜನಿಕ ಸಮಾರಂಭಗಳಿಗೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗುಪ್ತಚರ ಇಲಾಖೆ ಸಲಹೆಯಂತೆ ಬುಲೆಟ್ಪ್ರೂಫ್ ಕಾರು ಬಳಕೆ ಮಾಡುತ್ತಿದ್ದೇನೆ. ಕೆಲ ಸಚಿವರು ಉದ್ದೇಶಪೂರ್ವಕವಾಗಿ ಕರ್ನಾಟಕ ವಿರೋಧಿ ರಾಜ್ಯಪಾಲರು, ಗೋಬ್ಯಾಕ್ ಗವರ್ನರ್ ಚಳವಳಿ ನಡೆಸಿದ್ದಾರೆ ಎಂಬ ಅಂಶಗಳ ಸಂಕ್ಷಿಪ್ತ ವರದಿಯನ್ನು ಗೆಹ್ಲೋಟ್ ಅವರು ರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ರವಾನಿಸಿದ್ದಾರೆ.
ಮುಡಾ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ಹಿಂಪಡೆಯುವಂತೆ ಪ್ರತಿಭಟನೆಗಳ ಮೂಲಕ ರಾಜ್ಯ ಸರ್ಕಾರ, ರಾಜಭವನದ ಮೇಲೆ ನಿರಂತರ ಒತ್ತಡ ಹೇರುತ್ತಿದೆ. ಮಾಜಿ ಬಾಂಗ್ಲಾ ಪ್ರಧಾನಿಗೆ ಬಂದಂತಹ ಪರಿಸ್ಥಿತಿ ರಾಜ್ಯಪಾಲರಿಗೂ ಬರುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆ, ತಮ್ಮ ಪ್ರತಿಕೃತಿ ದಹನ ಮಾಡಲಾಗಿದೆ ಎಂದು ವರದಿಯಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದಾರೆ.