ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಸಂತ ನಾಡಿಗೇರ(59) ಬೆಂಗಳೂರಿನಲ್ಲಿ ಸೋಮವಾರ ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾದರು. ಮೂರೂವರೆ ದಶಕದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಚಟುವಟಿಕೆಯಿಂದ ಕೆಲಸ ಮಾಡುತ್ತಿದ್ದ ವಸಂತ ನಾಡಿಗೇರ ಅವರು ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ಪನ್ ಹೆಡ್ಡಿಂಗ್ಗಳ ಮೂಲಕವೇ ಸುದ್ದಿ ಮನೆಗಳಲ್ಲಿ ಜನಪ್ರಿಯರಾಗಿದ್ದರು. ಸರಳ, ಸಜ್ಜನಿಕೆಯ ವಸಂತ ನಾಡಿಗೇರ ಅವರು ಕನ್ನಡ ಪ್ರಭ, ವಿಜಯಕರ್ನಾಟಕ. ವಿಶ್ವವಾಣಿ ನಂತರ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.
ಪತ್ರಿಕಾ ವಲಯದಲ್ಲಿ ವಸಂತ ಸರ್ ಎಂದೇ ಹೆಸರಾದ ವಸಂತ ನಾಡಿಗೇರ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ ಪಡೆದು ಧಾರವಾಡದಲ್ಲಿ ಬಿಎಸ್ಸಿ, ಎಂಎಸ್ಸಿ ಪದವಿ ಪಡೆದವರು. ರಸಾಯನ ಶಾಸ್ತ್ರ ಪದವೀಧರರಾದ ವಸಂತ ನಾಡಿಗೇರ ಅವರು ಪತ್ರಿಕೋದ್ಯಮದ ಸೆಳೆತಕ್ಕೆ ಒಳಗಾಗಿ ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟದಿಂದ ವೃತ್ತಿ ಜೀವನ ಆರಂಭಿಸಿದವರು. ಆನಂತರ ಕನ್ನಡ ಪ್ರಭ ಸೇರಿ ಅಲ್ಲಿ ಒಂದೂವರೆ ದಶಕ ಕಾಲ ಕೆಲಸ ಮಾಡಿದರು. ಬಳಿಕ ವಿಜಯಕರ್ನಾಟಕ ಪತ್ರಿಕೆಯ ಆರಂಭದಿಂದಲೂ ಮುಖ್ಯ ಉಪಸಂಪಾದಕರಾಗಿ ಸೇರಿ ಅಲ್ಲಿಯೇ ಬಹುಕಾಲ ಸುದ್ದಿಸಂಪಾದಕರಾಗಿದ್ದರು. ಬಳಿಕ ಸಂಪಾದಕರೂ ಆದರು. ವಿಶ್ವವಾಣಿ ಪತ್ರಿಕೆಯ ಸಂಪಾದಕರಾಗಿ ಸದ್ಯ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು. ಪತ್ರಿಕಾ ಕಚೇರಿಯಲ್ಲಿ ವಸಂತ್ ಅವರಿದ್ದಾರೆ ಎಂದರೆ ಲವಲವಿಕೆ ಅಲ್ಲಿ ಇರುತ್ತಿತ್ತು. ಕೆಲಸ ಮಾಡುವ ಉಮೇದನ್ನು ಅವರು ತುಂಬುತ್ತಿದ್ದರು. ಸಾಕಷ್ಟು ಯುವ ಪತ್ರಕರ್ತರನ್ನೂ ಬೆಳೆಸಿದ್ದರು.
ಮೆದು ಮಾತಿನ, ಹಾಸ್ಯಲಹರಿಯ ಮೂಲಕ ಪತ್ರಿಕಾ ಕಚೇರಿಯಲ್ಲಿ ಸದಾ ನಗುವಿನ ವಾತಾವರಣ ಸೃಷ್ಟಿಸುತ್ತಿದ್ದ ವಸಂತ ನಾಡಿಗೇರ ಅವರು ಭಾಷೆಯ ಮೇಲೆ ಹಿಡಿತವಿತ್ತು. ಎಂತಹ ವರದಿಗೂ ಜನ ಮೆಚ್ಚುವಂತ ಶೀರ್ಷಿಕೆ ನೀಡುತ್ತಿದ್ದರು. ವಿಜಯಕರ್ನಾಟಕ ಪತ್ರಿಕೆಯಲ್ಲಿ ಅವರು ನೀಡಿದ ಶೀರ್ಷಿಕೆಗಳು ಮನೆ ಮಾತಾಗಿದ್ದವು. ಉತ್ತಮ ಬರಹಗಾರರೂ ಆಗಿದ್ದ ವಸಂತ ನಾಡಿಗೇರ ಅವರು ಕನ್ನಡ ಪ್ರಭದಲ್ಲಿ ಆರ್ಥಿಕ ವಿಶ್ಲೇಷಣೆ ಬರೆಯುತ್ತಿದ್ದರು. ಸಿನೆಮಾದಲ್ಲೂ ಆಸಕ್ತಿಇತ್ತು. ಲತಾ ಮಂಗೇಶ್ಕರ್ ಕುರಿತಾದ ಕೃತಿಯನ್ನು ಕನ್ನಡಕ್ಕೆ ತಂದಿದ್ದರು. ವಿಜಯಕರ್ನಾಟಕದಲ್ಲಿದ್ದಾಗ ಅವರ ಬಡಿಗೇರ್ ಹಾಗೂ ನಾಡಿಗೇರ್ ಎನ್ನುವ ಹಾಸ್ಯ ಅಂಕಣವೂ ಜನಪ್ರಿಯವಾಗಿತ್ತು.