ಯುಪಿಎಸ್ಸಿ ಮುಖ್ಯ ಪರೀಕ್ಷೆ ನಡೆಯುವ ದಿನ ಸೆಪ್ಟೆಂಬರ್ 22 ರಂದೇ ಪಿಎಸ್ಐ ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಎಕ್ಸ್ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ಯುಪಿಎಸ್ಸಿ ಪರೀಕ್ಷೆ ನಡೆಯುವ ದಿನವೇ ರಾಜ್ಯ ಸರ್ಕಾರ ಪಿಎಸ್ಐ ಪರೀಕ್ಷೆಗಳನ್ನು ನಡೆಸಲು ಹೊರಟಿದೆ. ಯುವಕರ ಭವಿಷ್ಯ ಕುರಿತು ಸರ್ಕಾರಕ್ಕೆ ಎಳ್ಳಷ್ಟು ಕಾಳಜಿ ಇಲ್ಲದಂತೆ ಕಾಣುತ್ತಿದೆ. ಯುವಕರ ಉತ್ತಮ ಭವಿಷ್ಯ ಸರ್ಕಾರವೇ ಹಾಳು ಮಾಡಲು ಹೋಗುತ್ತಿದೆ. ಯುಪಿಎಸ್ಸಿ ತಿಂಗಳುಗಳ ಮೊದಲೇ ಪರೀಕ್ಷಾ ದಿನಾಂಕ ಹೊರಡಿಸುತ್ತದೆ. ಅದರಂತೆ ಜೂನ್ 16 ರಂದು ಪ್ರಿಲಿಮ್ಸ್ ಎಕ್ಸಾಂ ನಡೆದಿದ್ದು ಇದೇ 22ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ. ಆದರೆ ಅದೇ ದಿನ ಪಿಎಸ್ಐ ಪರೀಕ್ಷೆ ನಡೆಸುತ್ತಿರುವುದು ನೋಡಿದರೆ ರಾಜ್ಯ ಸರ್ಕಾರಕ್ಕೆ ವಿವೇಚನೆ ಇಲ್ಲದಂತೆ ಕಾಣಿಸುತ್ತೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
ಸರ್ಕಾರ ಮತ್ತೊಂದು ಎಡವಟ್ಟು ಮಾಡಲು ಹೊರಟಿದ್ದು ಯುಪಿಎಸ್ಸಿ, ಎಸ್ಎಸ್ಸಿ ಪರೀಕ್ಷೆಗಳ ದಿನಾಂಕದಂದೆ ಪಿಎಸ್ಐ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದು ಉದ್ಯೋಗಾಕಾಂಕ್ಷಿಗಳ ವಿರೋಧಿ ಧೋರಣೆ ಆಗಿದೆ. ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆ.14 ಮತ್ತು 15ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆ.5 ರಂದು ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಕೆಲ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿ ವ್ಯತ್ಯಯ ಕಂಡುಬಂದಿದೆ. ತಾತ್ಕಾಲಿಕವಾಗಿ ಪ್ರವೇಶ ಪತ್ರದ ಡೌನ್ಲೋಡ್ ಪ್ರಕ್ರಿಯೆಯು ಸ್ಥಗಿತಗೊಳಿಸಿ ಕೆಪಿಎಸ್ಸಿ ಹಾಗೂ ಸರ್ಕಾರದ ಹುಳುಕು ಬಯಲಾಗಿದೆ. ಹೀಗಾಗಿ ಸರ್ಕಾರ ಸೆಪ್ಟೆಂಬರ್ 22 ರಂದು ನಡೆಸಲು ನಿರ್ಧರಿಸಿರುವ ಪಿಎಸ್ಐ ಪರೀಕ್ಷೆ ಮುಂದೂಡಬೇಕು. ಅಲ್ಲದೇ ಗ್ರೂಪ್-ಬಿ ಹುದ್ದೆಗಳ ಪರೀಕ್ಷೆಯ ಪ್ರವೇಶ ಪತ್ರ, ಪರೀಕ್ಷಾ ಕೇಂದ್ರಗಳ ಗೊಂದಲ ನಿವಾರಿಸಬೇಕು ಎಂದು ಕರ್ನಾಟಕ ಬಿಜೆಪಿ ಆಗ್ರಹ ಮಾಡಿದೆ.