ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ಶೀಟ್ ಇದೀಗ ಹಲವು ರಹಸ್ಯ ಮಾಹಿತಿಗಳನ್ನು ಬಯಲಿಗೆಳೆದಿದೆ. ಇದೀಗ ಪವಿತ್ರಾ ಹಾಗೂ ದರ್ಶನ್ ನಡುವಿನ ಸಂಬಂಧ, ಮನೆಯಲ್ಲಿನ ಜಗಳ ಕುರಿತು ಪೊಲೀಸರ ಮುಂದೆ ಪತ್ನಿ ವಿಜಯಲಕ್ಷ್ಮಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಪೈಕಿ 2014ರಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ನಡುವಿನ ಸಂಬಂಧ ಮಾಹಿತಿ ಸಿಕ್ಕಿತ್ತು. ಬಳಿಕ ಮನೆಯಲ್ಲಿ ಇದೇ ವಿಚಾರಕ್ಕೆ ಕಲಹ ಆರಂಭಗೊಂಡಿತ್ತು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. ಇಷ್ಟೇ ಅಲ್ಲ, ಪವಿತ್ರಾ ಗೌಡ ಜೊತೆ ದರ್ಶನ್ ಕಳೆದ ಖಾಸಗಿ ಕ್ಷಣಗಳ ಫೋಟೋ, ವಿಡಿಯೋಗಳನ್ನು ಮಾಧ್ಯಮಗಳಿಗೆ ನೀಡುವುದಾಗಿ ಬೆದರಿಸಿ ದರ್ಶನ್ಗೆ ಬ್ಲಾಕ್ಮೇಲ್ ಮಾಡುತ್ತಿದ್ದಳು ಎಂದು ವಿಜಯಲಕ್ಷ್ಮಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಫೋಟೋ, ವಿಡಿಯೋಗಳನ್ನು ಮುಂದಿಟ್ಟುಕೊಂಡ ಪವಿತ್ರಾ ಗೌಡ, ದರ್ಶನ್ಗೆ ಬ್ಲಾಕ್ಮೇಲ್ ಮಾಡುತ್ತಿದ್ದಳು. ಇದೇ ಬ್ಲಾಕ್ಮೇಲ್ ಮೂಲಕ ಪವಿತ್ರಾ ಗೌಡ 1.75 ಕೋಟಿ ರೂಪಾಯಿ ಮನೆಯನ್ನು ದರ್ಶನ್ ಮೂಲಕ ಖರೀದಿಸಿದ್ದರು. 2024ರಲ್ಲಿ ಇದೇ ರೀತಿ ಬ್ಲಾಕ್ಮೇಲ್ ಮಾಡಿ ಕೋಟಿ ರೂಪಾಯಿ ಬೆಲೆ ಬಾಳುವ ರೇಂಜ್ ರೋವರ್ ಕಾರನ್ನು ಖರೀದಿಸಿದ್ದರು. ಇದೇ ಖಾಸಗಿ ಕ್ಷಣಗಳ ಫೋಟೋ, ವಿಡಿಯೋಗಳನ್ನು ಮುಂದಿಟ್ಟುಕೊಂಡು ದರ್ಶನ್ನನ್ನು ತನ್ನತ್ತ ಸೆಳೆಯಲು ಪ್ರಯತ್ನಿಸಿದ್ದಾಳೆ ಎಂದು ವಿಜಯಲಕ್ಷ್ಮಿ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
2014ರಲ್ಲಿ ಹುಡುಗಿಯಿಂದ ದರ್ಶನ್ಗೆ ಮೆಸೇಜ್ ಬಂದಿತ್ತು. ಈ ಕುರಿತು ವಿಚಾರಿಸಿದಾಗ ಅದು ಪವಿತ್ರಾ ಗೌಡ ಅನ್ನೋ ಮಾಹಿತಿ ಸಿಕ್ಕಿತ್ತು. ಈ ಕುರಿತು ಅಂದೆ ದರ್ಶನ್ ಜೊತೆ ಕಲಹವಾಗಿತ್ತು. ಬಳಿಕ 2015ರಲ್ಲಿ ಮಹಿಳೆಯೊಬ್ಬಳು ನನಗೆ ಕರೆ ಮಾಡಿದ್ದಳು. ಈ ಮಹಿಳೆ ಪವಿತ್ರಾ ಗೌಡ. ನಿನ್ನ ಪತಿ ನನ್ನ ಜೊತೆ ರಿಲೇಶನ್ಶಿಪ್ನಲ್ಲಿದ್ದಾರೆ. ನಮ್ಮ ಮನೆಗೆ ಬರುತ್ತಾರೆ. ನಿನ್ನ ಪತಿಗೆ ಬುದ್ದಿ ಹೇಳು ಎಂದು ಪವಿತ್ರಾ ಗೌಡ ಫೋನ್ ಮೂಲಕ ವಿಜಯಲಕ್ಷ್ಮಿಗೆ ಹೇಳಿದ್ದಳು. ಫೋನ್ ಮೂಲಕ ಪವಿತ್ರಾ ಗೌಡ ವಿರುದ್ದ ಹರಿಹಾಯ್ದ ವಿಜಯಲಕ್ಷ್ಮಿ ಬಳಿಕ ದರ್ಶನ್ಗೆ ಕ್ಲಾಸ್ ತೆಗೆದುಕೊಂಡಿದ್ದರು. ಇಲ್ಲಿಂದ ಕಲಹ ಹೆಚ್ಚಾಯಿತು ಎಂದು ವಿಜಯಲಕ್ಷ್ಮಿ ಹೇಳಿರುವ ದಾಖಲೆಯನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದಾರೆ.
2009ರ ವರೆಗೆ ದರ್ಶನ್ ಹಾಗೂ ನನ್ನ ನಡುವೆ ಯಾವುದೇ ಕಲಹ ಇರಲಿಲ್ಲ ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿಗೆ ಹಲ್ಲೆ ಮಾಡಿ ಜೈಲು ಸೇರಿದ್ದ ದರ್ಶನ್ ಬಳಿಕ ಬಿಡುಗಡೆಯಾಗಿದ್ದರು. ಬಳಿಕ 2014ರ ವರೆಗೆ ಸಂಸಾರದಲ್ಲಿ ಮೂರನೆ ವ್ಯಕ್ತಿಗಳ ಪ್ರವೇಶ ಆಗಿರಲಿಲ್ಲ. ಯಾವಾಗ ಪವಿತ್ರಾ ಗೌಡ ನಮ್ಮ ಬದುಕಿನ ನಡುವೆ ಆಗಮಿಸಿದ ಬಳಿಕ ಕಲಹ ಜೋರಾಗಿತ್ತು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.