ರಸ್ತೆ ಗುಂಡಿಗಳು ಮುಚ್ಚುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದ್ದು, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಪೂರ್ವ ವಲಯ ವ್ಯಾಪ್ತಿಯಲ್ಲಿ ವಿವಿಧ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆ ಹಾಗೂ ವಾರ್ಡ್ ರಸ್ತೆಗಳನ್ನು ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು. ಪೂರ್ವ ವಲಯದ ಶಾಂತಲಾನಗರ ವ್ಯಾಪ್ತಿಯ ವಾರ್ ಮೆಮೋರಿಯಲ್ ಜಂಕ್ಷನ್(ಡೆಕತ್ಲಾನ್ ಹತ್ತಿರ)ಬಳಿ ರಸ್ತೆ ಮೇಲ್ಮೈ ಹಾಳಾಗಿದ್ದು, ಅದರಿಂದ ವಾಹನಗಳ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಕೂಡಲೆ ಮಿಲ್ಲಿಂಗ್ ಮಾಡಿ ರಸ್ತೆ ಮೇಲ್ಮೈ ಸರಿಪಡಿಸಿಲು ಸೂಚನೆ ನೀಡಿದರು.
ಇನ್ನು ಇದೇ ಜಂಕ್ಷನ್ ನಲ್ಲಿ ಪಾದಚಾರಿ ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿದ್ದು, ಮಾದಚಾರಿ ಮಾರ್ಗದ ಸೈಡ್ ಡ್ರೈನ್ ಸ್ಲ್ಯಾಬ್ ಎಲ್ಲಾ ಹಾಳಾಗಿದೆ. ಅಲ್ಲದೆ ಕರ್ಬ್ಸ್ ಅಳವಡಿಸದೆ ರಸ್ತೆ ಮಾರ್ಗದಲ್ಲೇ ಬಿಟ್ಟಿದ್ದಾರೆ. ಅದನ್ನು ಕಂಡು ಕೂಡಲೆ ದುರಸ್ತಿ ಕಾರ್ಯ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ವಿಕ್ಟೋರಿಯಾ ಲೇಔಟ್ ನ ಪಿ.ಕೆ ಕ್ವಾಟ್ರಸ್ ರಸ್ತೆ(ಹೈದರಾಬಾದ್ ಬಿರಿಯಾನಿ ಹೌಸ್ ಜಂಕ್ಷನ್)ಯ ಮದ್ಯಭಾಗದಲ್ಲಿ ಜಲಂಡಳಿ ರಸ್ತೆ ಕತ್ತರಿಸಿದ್ದು, ಅದನ್ನು ಸರಿಯಾಗಿ ದುರಸ್ತಿಪಡಿಸಿಲ್ಲದೇ ಇರುವುದನ್ನು ನೋಡಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸರಿಪಡಿಸಲು ಸೂಚನೆ ನೀಡಿದರು.
ವಿಕ್ಟೋರಿಯಾ ಲೇಔಟ್ ನ ಪಾಮ್ ಗ್ರೋವ್ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ನಡೆಸಲು ತೆಗೆದುಕೊಳ್ಳಲಾಗಿದ್ದು, ರಸ್ತೆಯ ಮೇಲ್ಮೈ ಸಂಪೂರ್ಣ ಹಾಳಾಗಿರುತ್ತದೆ. ಅದನ್ನು ಮಿಲ್ಲಿಂಗ್ ಮಾಡಿ ರೆಸ್ಟೋರ್ ಮಾಡಲು ಸೂಚಿಸಿದರು.
ಮದರ್ ಥೆರೆಸಾ ರಸ್ತೆಯಲ್ಲಿ ಜಲಂಡಳಿ ಒಳಚರಂಡಿ ಕಾಮಗಾರಿ ನಡೆಸಿ ದುರಸ್ತಿ ಮಾಡಲಾಗಿರುತ್ತದೆ. ಆದರೆ, ದುರಸ್ತಿ ಮಾಡಿರುವ ಭಾಗ ಕುಸಿದು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅದನ್ನು ಕೂಡಲೆ ಸರಿಪಡಿಸಲು ಸೂಚನೆ ನೀಡಿದರು.
ವಸಂತನಗರ 6ನೇ ಮುಖ್ಯ ರಸ್ತೆಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಪರಿಶೀಲಿಸಿ, ಗುಣಮಟ್ಟವನ್ನು ಕಾಪಾಡಿಕೊಂಡು ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಕಾಲಮಿತಿಯೊಳಗಾಗಿ ಮುಚ್ಚಬೇಕು. ಇಲ್ಲವಾದಲ್ಲಿ ಸಂಬಂಧ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತು ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು. ಈ ವೇಳೆ ಮುಖ್ಯ ಅಭಿಯಂತರರಾದ ಸುಗುಣಾ, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.