ಕಾರು ಅಪಘಾತದಲ್ಲಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿರುವ ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ಅವರನ್ನು ಕೆಂಗೇರಿ ಬಳಿಯ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಎದೆ ಭಾಗಕ್ಕೆ ಹೆಚ್ಚು ಪೆಟ್ಟಾಗಿರುವ ಕಾರಣ ಕಿರಣ್ ರಾಜ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಇದೇ ಶುಕ್ರವಾರ ಅವರ ನಟನೆಯ ರಾನಿ ಸಿನಿಮಾ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನವೇ ಅಪಘಾತದಲ್ಲಿ ಗಾಯಗೊಂಡಿರುವುದು ಬೇಸರ ಸಂಗತಿಯಾಗಿದೆ. ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್ ರಾಜ್ ತೆರಳುತ್ತಿದ್ದರು. ಈ ಕೇಂದ್ರಕ್ಕೆ ಪ್ರತಿವಾರ ಭೇಟಿ ನೀಡಿ ಅನಾಥ ಮಕ್ಕಳಿಗೆ ಊಟ ನೀಡುತ್ತಿದ್ದರು. ನಾಳೆ ಕಿರಣ್ ರಾಜ್ ಅಭಿನಯದ ರಾನಿ ಸಿನಿಮಾ ರಿಲೀಸ್ ಹಿನ್ನೆಲೆ ಎರಡು ದಿನಗಳ ಮುಂಚೆಯೇ ಆಹಾರ ನೀಡಲು ಹೋಗಿದ್ದರು.
ಈ ನಡುವೆ ಅಪಘಾತ ಸಂಭವಿಸಿದ್ದು, ತೀವ್ರ ನಿಘಾ ಘಟಕದಲ್ಲಿ ಇರಿಸಲಾಗಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಕಿರಣ್ ರಾಜ್ ಜತೆ ರಾನಿ ಸಿನಿಮಾದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕೂಡ ಇದ್ದರು. ಅವರು ಸೀಟ್ ಬೆಲ್ಟ್ ಧರಿಸಿದ್ದರಿಂದ ಬಚಾವ್ ಆಗಿದ್ದಾರೆ. ಆದರೆ, ಕಿರಣ್ ರಾಜ್ ಅವರ ಎದೆ ಭಾಗಕ್ಕೆ ಭಾರಿ ಪೆಟ್ಟು ಬಿದ್ದಿರುವುದರಿಂದ ಕೆಂಗೇರಿ ಹತ್ತಿರದ ಬೆಂಗಳೂರು ಹಾಸ್ಪಿಟಲ್ಗೆ ದಾಖಲಿಸಲಾಗಿದೆ. ಗಿರೀಶ್ ಅವರು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ರಸ್ತೆಗೆ ಅಡ್ಡಲಾಗಿ ಬಂದ ಮುಂಗುಸಿಯನ್ನು ತಪ್ಪಿಸಲು ಹೋಗಿ, ಗುದ್ದಿದ ರಭಸಕ್ಕೆ ಕಾರಿನ ಮುಂಭಾಗದ ಟೈರ್ ಕಿತ್ತುಬಂದಿದೆ.