ಬೆಳಗಾವಿ : ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಕೇಳಿಬರುತ್ತಿದೆ. ಈ ಮಧ್ಯೆ ಮಹಿಳಾ ಸಿಎಂ ಬಗ್ಗೆ ಕೋಡಿಮಠದ ಶ್ರೀಗಳ ಹೇಳಿಕೆ ಕೂಡ ವೈರಲ್ ಆಗಿತ್ತು. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೋಡಿಮಠದ ಶ್ರೀಗಳ ಹೇಳಿಕೆ ಬಗ್ಗೆ ಗರಂ ಆಗಿದ್ದು, ಅದೇಲ್ಲ ನಗಣ್ಯ ಎಂದು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಬಗ್ಗೆ ಸುಳ್ಳು ದಾಖಲೆ ಕೊಟ್ಟು ಬಿಜೆಪಿಯವರು ಏನೋ ಮಾಡುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ನಾವೆಲ್ಲ ಸಿದ್ದರಾಮಯ್ಯ ಬೆನ್ನಿಗೆ ಗಟ್ಟಿಯಾಗಿ ನಿಲ್ಲಬೇಕಿದೆ. ಇದೆಲ್ಲ ಬಾಲಿಷ ಅನಿಸುತ್ತದೆ. ಈ ವಿಚಾರವಾಗಿ ನಾನು ಏನೂ ಮಾತನಾಡಲು ಬಯಸಲ್ಲ ಎಂದಿದ್ದಾರೆ.
ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೇಳುತ್ತೇನೆ. ಪಕ್ಷದಲ್ಲಿ ಹೈಕಮಾಂಡ್, ಶಾಸಕಾಂಗ ಅಂತ ಇದೆ. ಆದರೆ ಇಂತಹ ವಿಚಾರವನ್ನು ಅಲ್ಲಿ, ಇಲ್ಲಿ ಗಲ್ಲಿಯಲ್ಲಿ ಮಾತನಾಡುವ ವಿಚಾರ ಅಲ್ಲ. ಧೀಮಂತ ನಾಯಕತ್ವ ನಮ್ಮ ಪಕ್ಷಕ್ಕೆ ಇದೆ. ಸಿಎಂ ಸಿದ್ದರಾಮಯ್ಯ ಜೊತೆಗೆ ಗಟ್ಟಿಯಾಗಿ ಇರುತ್ತಾರೆ. ಸಿದ್ದರಾಮಯ್ಯ ಎಲ್ಲಿಯವರೆಗೆ ಗಟ್ಟಿಯಾಗಿ ಇರುತ್ತಾರೆ ಅಲ್ಲಿಯವರೆಗೆ ಅವರೇ ಸಿಎಂ. ಅಲ್ಲಿ ಇಲ್ಲಿ ಗಲ್ಲಿ, ಹಾದಿ ಬೀದಿಯಲ್ಲಿ ಮಾತನಾಡುವ ವಿಷಯ ಅಲ್ಲ. ಸಿದ್ದರಾಮಯ್ಯ ಎಲ್ಲಿಯವರೆಗೆ ಇರುತ್ತೇನೆ ಅಂತಾರೆ ಅಲ್ಲಿಯವರೆಗೆ ನಮ್ಮ ಬೆಂಬಲ ಅವರಿಗೆ ಇದೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಕಳೆದ ತಿಂಗಳು ಮಾತನಾಡಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಗಳು ರಾಜ್ಯದಲ್ಲಿ ಮುಂದಿನ ಸಿಎಂ ಮಹಿಳೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ ಇದೀಗ ಲಕ್ಷೀ ಹೆಬ್ಬಾಳ್ಕರ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮುಂದಿನ ಸಿಎಂ ಲಕ್ಷೀ ಹೆಬ್ಬಾಳ್ಕರ್ ಎಂದು ಪೋಸ್ಟ್ ಹರಿಬಿಟ್ಟಿದ್ದಾರೆ.