ಸ್ಪೇಸ್ಎಕ್ಸ್ನಿಂದ ಹಮ್ಮಿಕೊಂಡಿದ್ದ ‘ಪೋಲಾರಿಸ್ ಡಾನ್ ಮಿಷನ್’ ಬಾಹ್ಯಾಕಾಶ ನಡಿಗೆ ಯಶಸ್ವಿಯಾಗಿದ್ದು, ಗಗನಯಾತ್ರಿಕರು ಅಂತರಿಕ್ಷದಲ್ಲಿ ಓಡಾಟ ನಡೆಸಿದ್ದಾರೆ. ಬಿಲಿಯನೇರ್ ಜೇರೆಡ್ ಐಸಾಕ್ಮನ್ (41) ಖಾಸಗಿ ಬಾಹ್ಯಾಕಾಶ ನಡಿಗೆಯಲ್ಲಿ ಭಾಗವಹಿಸಿದ ಮೊದಲ ವ್ಯಕ್ತಿಯಾಗಿದ್ದಾರೆ. ಇವರ ಜೊತೆಗೆ ಸ್ಪೇಸ್ಎಕ್ಸ್ ಎಂಜಿನಿಯರ್ ಸಾರಾ ಗಿಲ್ಲಿಸ್ (30) ಕೂಡ ಅಂತರಿಕ್ಷ ನಡಿಗೆ ಮಾಡಿದ್ದಾರೆ.
ಇದರ ವೀಡಿಯೋವನ್ನು ಟೆಸ್ಲಾ ಓನರ್ಸ್ ಸಿಲಿಕಾನ್ ವ್ಯಾಲಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಬಾಹ್ಯಾಕಾಶ ಸಂಸ್ಥೆಯು ಮಂಗಳವಾರ ‘ಪೋಲಾರಿಸ್ ಡಾನ್ ಮಿಷನ್’ ಫ್ಲೋರಿಡಾದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಐದು ದಿನಗಳ ಕಾರ್ಯಾಚರಣೆಯ 3ನೇ ದಿನದಂದು ಈ ಬಾಹ್ಯಾಕಾಶ ನಡಿಗೆಯನ್ನು ಕೈಗೊಳ್ಳಲಾಗಿದೆ.
ಸ್ಪೇಸ್ಎಕ್ಸ್ನ ಗಗನಯಾತ್ರಿ ಡ್ರ್ಯಾಗನ್ ಕ್ಯಾಪ್ಸುಲ್ನಿಂದ ಹೊರಬಂದ ನಂತರ ಭೂಮಿಯ ಅಂತರಿಕ್ಷ ನೋಟವನ್ನು ನೋಡುತ್ತಾ, ಸ್ಪೇಸ್ಎಕ್ಸ್, ಮನೆಗೆ ಹಿಂತಿರುಗಿ ನಮಗೆ ಸಾಕಷ್ಟು ಕೆಲಸಗಳಿವೆ. ಆದರೆ ಇಲ್ಲಿಂದ ಇದು ಪರಿಪೂರ್ಣ ಪ್ರಪಂಚದಂತೆ ಕಾಣುತ್ತದೆ. ಅರ್ಧ ಶತಮಾನದಲ್ಲಿ ಮೊದಲ ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಸ್ಪೇಸ್ಎಕ್ಸ್ಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಉಡಾವಣೆಗೊಳ್ಳಬೇಕಿದ್ದ ‘ಪೋಲಾರಿಸ್ ಡಾನ್ ಮಿಷನ್’ ಹೀಲಿಯಂ ಅನಿಲ ಸೋರಿಕೆಯಿಂದ ವಿಳಂಬವಾಗಿತ್ತು. ಬಳಿಕ ಉಡಾವಣೆಯನ್ನು ಮುಂದೂಡಲಾಗಿತ್ತು. ಸ್ಪೇಸ್ಎಕ್ಸ್ನ ಐದು ದಿನಗಳ ಯೋಜನೆ ಇದಾಗಿದೆ. ಗಗನಯಾತ್ರಿಗಳು ಅಂಡಾಕಾರದ ಕಕ್ಷೆಯಲ್ಲಿ ಸಂಚರಿಸಿದ್ದು, ಭೂಮಿಗೆ ಅತಿ ಸಮೀಪ 190 ಕಿಮೀ ಹಾಗೂ ಅತಿ ದೂರ 1,400 ಕಿಮೀ ವರೆಗೂ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.