ನವದೆಹಲಿ: ಸೆಪ್ಟೆಂಬರ್ 17 ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ. ತಮ್ಮ ಜನ್ಮದಿನದಂದು ಪ್ರಧಾನಿ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಲಿದ್ದಾರೆ. ಈ ದಿನ ಮಹತ್ವದ ಯೋಜನೆಯೊಂದಕ್ಕೆ ಮೋದಿ ಚಾಲನೆ ನೀಡಲಿದ್ದಾರೆ ಎಂದು ಎಲ್ಲೆಡೆ ವರದಿಯಾಗಿದೆ.
ಇನ್ನು ಮೋದಿ ಜನ್ಮದಿನದಂದು ‘ಸುಭದ್ರಾ ಯೋಜನೆ’ಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ವರ್ಷ 10 ಸಾವಿರ ಸಿಗಲಿದೆ. ಹಾಗಿದ್ರೆ ಇದು ಹೇಗೆ ಸಿಗಲಿದೆ? ಈ ಯೋಜನೆಯ ಉದ್ದೇಶ ಏನು ಈ ಬಗ್ಗೆ ಸಂಪೂರ್ಣ ಮಾಹಿತಿ ಓದಿ.
ಪ್ರಮುಖ ವಿಷಯವೆಂದರೆ ಒಡಿಶಾದಲ್ಲಿ ಮಹಿಳೆಯರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ದೊಡ್ಡ ಯೋಜನೆಯನ್ನು ಮೊದಲೇ ಹೇಳಿತ್ತು ಮತ್ತು ಒಡಿಶಾದ ಮಹಿಳೆಯರು ಲೋಕಸಭೆ ಚುನಾವಣೆಯಲ್ಲಿ ಮಾತ್ರವಲ್ಲದೆ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡಿದ್ದರು.
ಸುಭದ್ರಾ ಯೋಜನೆ ಎಂದರೇನು?:
ಈ ಯೋಜನೆಯಡಿ ಪ್ರತಿಯೊಬ್ಬ ಅರ್ಹ ಫಲಾನುಭವಿಯು ವರ್ಷಕ್ಕೆ ಎರಡು ಸಮಾನ ಕಂತುಗಳಲ್ಲಿ ತಲಾ 10 ಸಾವಿರ ರೂಪಾಯಿ ನೀಡಲಾಗುತ್ತದೆ. ಮಹಿಳೆಗೆ ಐದು ವರ್ಷಗಳಲ್ಲಿ ಒಟ್ಟು 50 ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಹೇಳಲಾಗಿದೆ. 21 ರಿಂದ 60 ವಯಸ್ಸಿನ ಎಲ್ಲಾ ಅರ್ಹ ಮಹಿಳೆಯರು ಸುಭದ್ರಾ ಯೋಜನೆಯಡಿ ಈ ಪ್ರಯೋಜನವನ್ನು ಪಡೆಯುತ್ತಾರೆ.
ಒಂದು ಕುಟುಂಬದಲ್ಲಿ ಇಬ್ಬರು ಅಥವಾ ಮೂವರು ಅರ್ಹ ಮಹಿಳೆಯರು ಇದ್ದರೆ ಎಲ್ಲರಿಗೂ ಈ ಯೋಜನೆ ಅನುಕೂಲವಾಗಲಿದೆ. ಸರ್ಕಾರದಿಂದ ವಿಧವಾ ಪಿಂಚಣಿ ಮತ್ತು ಸ್ಕಾಲರ್ಶಿಪ್ ಪಡೆಯುವ ಮಹಿಳೆಯರು ಸೇರಿದಂತೆ ಎಲ್ಲಾ ಅರ್ಹ ಮಹಿಳೆಯರು ಇದರ ಸಹಾಯ ಪಡೆಯುತ್ತಾರೆ.
ದೇಶಾದ್ಯಂತ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಹಲವು ರಾಜ್ಯಗಳಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಇದೀಗ ಒಡಿಶಾ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಈ ಯೋಜನೆಯು 2024-25 ರಿಂದ 2028-29 ರ ಆರ್ಥಿಕ ವರ್ಷವನ್ನು ಒಳಗೊಂಡ ಐದು ವರ್ಷಗಳವರೆಗೆ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ. ಇದಕ್ಕಾಗಿ ಒಡಿಶಾ ರಾಜ್ಯ ಸರ್ಕಾರ 55,825 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಿದೆ.