ತುಮಕೂರು ರಸ್ತೆಯ ಪೀಣ್ಯ ಮೇಲೇತುವೆಯ 120 ಪಿಲ್ಲರ್ಗಳ ನಡುವೆ ಹೊಸ ಕೇಬಲ್ ಅಳವಡಿಕೆ ಕಾರ್ಯ ಭರದಿಂದ ಸಾಗಿದ್ದು ಈಗಾಗಲೇ 390 ಕೇಬಲ್ಗಳನ್ನು ಯಶಸ್ವಿಯಾಗಿ ಬದಲಿಸಲಾಗಿದೆ. ಮೇಲೇತುವೆಯ 120 ಪಿಲ್ಲರ್ ನಡುವೆ ತಲಾ 10 ರಂತೆ 1200 ಕೇಬಲ್ಗಳಿದ್ದು ಇವುಗಳನ್ನು ಹೊಸದಾಗಿ ಹಂತ ಹಂತವಾಗಿ ಬದಲಾಯಿಸುವ ಕಾರ್ಯ ನಡೆಯುತ್ತಿದ್ದು ಈವರೆಗೂ 390 ಕೇಬಲ್ಗಳನ್ನು ಅಳವಡಿಸುವ ಕಾರ್ಯ ಯಶಸ್ವಿಯಾಗಿದೆ. ಕೇಬಲ್ ಬದಲಾವಣೆ ಕಾರ್ಯದಲ್ಲಿ ನಾಲ್ಕು ತಂಡಗಳು ನಿರತವಾಗಿದ್ದು ಕಾರ್ಯ ಬಿರುಸಿನಿಂದ ಸಾಗಿದೆ.
ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಭಾಗದಲ್ಲಿ ಬರುವ ಈ ಮೇಲೇತುವೆ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಪಾರ್ಲೆ ಜಿ ಫ್ಯಾಕ್ಟರಿವರೆಗೂ ಸುಮಾರು 5 ಕಿ.ಮೀ. ಉದ್ದವಿದೆ. ಮೇಲ್ಸೇತುವೆಗೆ ಒಟ್ಟಾರೆ 120 ಪಿಲ್ಲರ್ಗಳಿದ್ದು 8ನೇ ಮೈಲಿ ಜಂಕ್ಷನ್ ಸಮೀಪ 102 ಮತ್ತು 103 ನೇ ಪಿಲ್ಲರ್ ನಡುವೆ 3 ಕೇಬಲ್ ಬಾಗಿದ್ದರಿಂದ ಡಿ.2021 ರಿಂದ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧಿಸಿತ್ತು.
ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರು ಪರಿಶೀಲನೆ ನಡೆಸಿ ಅಧಿಕ ಭಾರವಿರುವ ವಾಹನಗಳು ಸಂಚರಿಸಿದ್ದರಿಂದ ಕೇಬಲ್ಗಳು ಬಾಗಿವೆ ಎಂದು ವರದಿ ನೀಡಿದ್ದರು. ಫೆಬ್ರವರಿ 2022 ರಿಂದ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ನಂತರ ಭಾರ ಪರೀಕ್ಷೆ ನಡೆಸಿ, ಬಳಿಕ ತಜ್ಞರ ಸಮಿತಿ ರಚಿಸಿ, ವರದಿ ಪಡೆಯಲಾಗಿತ್ತು. ಕೊನೆಗೆ 120 ಪಿಲ್ಲರ್ ನಡುವೆ ಹೊಸದಾಗಿ ತಲಾ ಎರಡರಂತೆ 240 ಕೇಬಲ್ ಅಳವಡಿಸಿ ಸೇತುವೆ ಸದೃಢಗೊಳಿಸಲಾಗಿತ್ತು. 120 ಪಿಲ್ಲರ್ ನಡುವಿನ ತಲಾ 10 ಕೇಬಲ್ಗಳ ಬದಲಾವಣೆಗೆ ಜುಲೈ ಕೊನೆ ವಾರದಲ್ಲಿ ಚಾಲನೆ ನೀಡಲಾಗಿತ್ತು. ಸಿಮೆಂಟ್ ಕೆಲಸ ಕೈಗೊಳ್ಳುತ್ತಿರುವುದರಿಂದ ಶುಕ್ರವಾರ ಮಾತ್ರ ಮೇಲ್ಸೇತುವೆ ಮೇಲೆ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ.