ಲೇಡಿ ಕೊರಿಯೋಗ್ರಾಫರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ರಾಯದುರ್ಗ ಪೊಲೀಸರು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಜಾನಿ ಮಾಸ್ಟರ್ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು. ಇದೀಗ ಕೊರಿಯೋಗ್ರಾಫರ್ ಜೈಲು ಸೇರಿದ್ದಾರೆ. ಜಾನಿ ಮಾಸ್ಟರ್ ತನಿಖಾ ವರದಿ ಮಾಧ್ಯಮಗಳ ಕೈಗೆ ಸಿಕ್ಕಿದೆ. ಜಾನಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ ಎನ್ನಲಾಗ್ತಿದೆ.
ಬಯಲಾಯ್ತು ಜಾನಿಯ ಕರಾಳ ಮುಖ!
ದುರುದ್ದೇಶದಿಂದಲೇ ಜಾನಿ ಆಕೆಯನ್ನು ಸಹಾಯಕಿಯಾಗಿ ನೇಮಿಸಿಕೊಂಡಿದ್ದಾನೆ ಎಂದು ಪೊಲೀಸರು ವರದಿಯಲ್ಲಿ ಬರೆದಿದ್ದಾರೆ. 2020ರಲ್ಲಿ, ಜಾನಿ ಮುಂಬೈನ ಹೋಟೆಲ್ನಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಲೈಂಗಿಕ ದೌರ್ಜನ್ಯ ನಡೆದಾಗ ಸಂತ್ರಸ್ತೆಗೆ 16 ವರ್ಷ ವಯಸ್ಸಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ವರ್ಷಗಳ ಅವಧಿಯಲ್ಲಿ ಜಾನಿ ಸಂತ್ರಸ್ತೆಯ ಮೇಲೆ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವರದಿ ಬರೆಯಲಾಗಿದೆ ಎನ್ನಲಾಗಿದೆ.
ಸಂತ್ರಸ್ತೆಗೆ ಬೆದರಿಕೆ ಹಾಕಿದ್ರಂತೆ ಗಂಡ-ಹೆಂಡತಿ!
ಈ ವಿಚಾರವನ್ನು ಎಲ್ಲಾದ್ರೂ ಬಾಯ್ಬಿಟ್ರೇ ನಿನಗೆ ಸಿನಿಮಾ ಆಫರ್ ಸಿಗದಂತೆ ಮಾಡ್ತೀನಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ರಿಮ್ಯಾಂಡ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗ್ತಿದೆ. ಸಂತ್ರಸ್ತೆಗೆ ಸಿನಿಮಾ ಅವಕಾಶಗಳು ಸಿಗದಂತೆ ಮಾಡಲು ತಮ್ಮ ಖ್ಯಾತಿಯನ್ನು ಬಳಸಿಕೊಂಡಿದ್ದರು ಎಂದೂ ಹೇಳಲಾಗಿದೆ. ಅದರಲ್ಲಿ ಜಾನಿ ಪತ್ನಿ ಕೂಡ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ.
14 ದಿನಗಳ ಕಾಲ ನ್ಯಾಯಾಂಗ ಬಂಧನ
ಪೊಲೀಸರ ಕೈಗೆ ಸಿಗದೆ ಓಡಾಡ್ತಿದ್ದ ಜಾನಿ ಮಾಸ್ಟರ್ನನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ರು. ಇಂದು ಮುಂಜಾನೆ ಜಾನಿ ಮಾಸ್ಟರ್ನನ್ನು ಹೈದಾರಾಬಾದ್ಗೆ ಕರೆತಂದಿದ್ದ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ರು. ವಿಚಾರಣೆ ನಡೆಸಿದ ನ್ಯಾಯಾಲಯ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಲಾಗಿದೆ.
ಚೆರ್ಲಪಲ್ಲಿ ಸೆಂಟ್ರಲ್ ಜೈಲಿಗೆ ಜಾನಿ ಶಿಫ್ಟ್!
ಜಾನಿ ಮಾಸ್ಟರ್ನನ್ನು ಚೆರ್ಲಪಲ್ಲಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗುವುದು. ನ್ಯಾಯಾಂಗ ಬಂಧನದ ಅವಧಿಯಲ್ಲಿ ಪೊಲೀಸರು ವಿವರವಾಗಿ ತನಿಖೆ ನಡೆಸಲಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರಿಂದ ಜಾನಿ ಮಾಸ್ಟರ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಜಾನಿ ಮಾಸ್ಟರ್ ಕೆಲ ವಿಚಾರಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗ್ತಿದೆ. ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಮಾತಾಡಿದ ಜಾನಿ ಮಾಸ್ಟರ್, ನಾನು ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ. ಅವರ ವಿರುದ್ಧ ಕೆಲವರು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಿ ಪ್ರಾಮಾಣಿಕವಾಗಿ ಹೊರಬರುತ್ತೇನೆ ಎಂದು ಹೇಳಿದ್ದಾರೆ.