ಇಂದು ವಿಶ್ವ ಪ್ರವಾಸೋದ್ಯಮ ದಿನ. ಪ್ರವಾಸ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಕೆಲವರು ಬಿಡುವು ಸಿಕ್ಕಾಗಲೆಲ್ಲಾ ಲಾಂಗ್ ಡ್ರೈವ್ ಎಂದು ಊರು ಸುತ್ತುತ್ತಾ ಹೊಸ ಹೊಸ ತಾಣಗಳನ್ನು ಸವಿಯುತ್ತಾರೆ. ಅದಲ್ಲದೇ ಒತ್ತಡದ ನಡುವೆ ರಿಲ್ಯಾಕ್ಸ್ ಆಗಲು, ಮನಸ್ಸಿಗೆ ಇಷ್ಟರಾಗುವವರ ಜೊತೆ ಒಂದು ಪ್ರವಾಸ ಮಾಡಿದರೆ ಶಾಶ್ವತವಾಗಿ ನೆನಪಲ್ಲಿ ಉಳಿಯುತ್ತದೆ ಹಾಗೂ ಕುಟುಂಬಕ್ಕೆ ಸಮಯ ಕೊಡಲು ಪ್ರವಾಸ ಎನ್ನುವುದು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಕೆಲವರು ಋತುವಿಗೆ ತಕ್ಕಂತೆ ನೋಡಬಹುದಾದ ಸ್ಥಳಗಳಿಗೆ ತೆರಳಲು ಪ್ಲಾನ್ ಮಾಡಿಕೊಳ್ಳುವುದಿದೆ. ಇತ್ತೀಚೆಗಿನ ವರ್ಷಗಳಲ್ಲಿ ಪ್ರವಾಸದ್ಯೋಮವು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದ್ದು, ಅನೇಕರಿಗೆ ಜೀವನವನ್ನು ಕಟ್ಟಿಕೊಟ್ಟಿದೆ. ಜಾಗತಿಕ ಮಟ್ಟದಲ್ಲಿ ಪ್ರವಾಸವನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
![8 Top Heritage Sites in Karnataka, Tourist Places & Attractions - Tour Packages - AWAYCABS](https://www.awaycabs.in/uploads/image/tour-packages/heritage-sites-in-karnataka-1/heritage-sites-in-karnataka-1.jpg)
1980ರಲ್ಲಿ ಮೊದಲ ಬಾರಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಯಿತು. ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ಸ್ಪೇನ್ ದೇಶದ ಟೊರೆಮೊಲಿನೋಸ್ನಲ್ಲಿ ನಡೆದ ತನ್ನ ಮೂರನೇ ಅಧಿವೇಶನದಲ್ಲಿ ಈ ದಿನವನ್ನು ಆಚರಿಸಲು ನಿರ್ಧರಿಸಿತು. ಸೆಪ್ಟೆಂಬರ್ 27 ರನ್ನು ಆಯ್ಕೆ ಮಾಡಿದ್ದರ ಹಿಂದಿನ ಉದ್ದೇಶವೆಂದರೆ 1970 ರಲ್ಲಿ ವಿಶ್ವಸಂಸ್ಥೆಯ ಪ್ರವಾಸೋದ್ಯಮ ಸಂಸ್ಥೆಯ ಶಾಸನಗಳನ್ನು ಈ ದಿನದಂದು ಅಂಗೀಕರಿಸಲಾಯಿತು. ಈ ಸವಿನೆನಪಿಗಾಗಿ ಪ್ರತಿವರ್ಷ ಸೆಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಪ್ರವಾಸೋದ್ಯಮದ ದಿನದ ಮುಖ್ಯ ಉದ್ದೇಶವೇ ಉದ್ಯೋಗವನ್ನು ಉತ್ತೇಜಿಸುವುದು, ಪ್ರವಾಸೋದ್ಯಮ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮತ್ತು ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಹೆಚ್ಚು ಹೆಚ್ಚು ಮಾಹಿತಿ ನೀಡುವುದಾಗಿದೆ. ಹೊಸ ಹೊಸ ತಾಣಗಳನ್ನು ನೋಡಲು ಕಾತುರರಾಗಿರುವ ಅದೆಷ್ಟೋ ಪ್ರವಾಸಿಗರಿಗಾಗಿಯೇ ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳನ್ನು ಸುಂದರಗೊಳಿಸಿ ಹೊಸ ಹೊಸ ವ್ಯವಸ್ಥೆಯನ್ನು ಮಾಡುತ್ತವೆ. ಈ ವಿಶೇಷ ದಿನದಂದು ಪ್ರವಾಸದ್ಯೋಮದ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಾಗಾರಗಳು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಕರ್ನಾಟಕದಲ್ಲಿರುವ ವಿಚಿತ್ರ ವಿನ್ಯಾಸಗಳನ್ನೊಳಗೊಂಡ ಆಕರ್ಷಕ ತಾಣಗಳು
- ಮಧುಗಿರಿ ಬೆಟ್ಟ : ಏಷಿಯಾದಲ್ಲೆ ಎರಡನೇಯ ಅತಿ ದೊಡ್ಡ ಏಕಬಂಡೆ ಶಿಲಾ ರಚನೆಗೆ ಪ್ರಸಿದ್ಧವಾಗಿರುವ ಈ ಸ್ಥಳವಿರುವುದು ತುಮಕೂರು ಜಿಲ್ಲೆಯಲ್ಲಿ ಮಧುಗಿರಿ ತನ್ನ ಬೆಟ್ಟ ಕೋಟೆಗೆ ಪ್ರಸಿದ್ಧವಾಗಿದೆ. ಈ ಮಧುಗಿರಿ ಬೆಟ್ಟವು ತನ್ನ ಶಿಲಾರಚನೆಯಿಂದ ಎಲ್ಲರನ್ನು ಬೆರಗು ಮೂಡಿಸುತ್ತದೆ.
![](https://guaranteenews.com/wp-content/uploads/2024/09/IMG_5209-1024x683.jpg)
- ಕೊಣಾಜೆ ಕಲ್ಲು : ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿರುವ ಕೊಣಾಜೆ ಎಂಬಲ್ಲಿ ಈ ದೈತ್ಯ ಗಾತ್ರದ ಗ್ರಾನೈಟ್ ಬಂಡೆಗಲ್ಲಿದೆ. ಇದನ್ನೇ ಕೊಣಾಜೆ ಕಲ್ಲು ಎಂದು ಕರೆಯುತ್ತಾರೆ. ಇದನ್ನು ನೋಡಲೆಂದೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
![](https://guaranteenews.com/wp-content/uploads/2024/09/q̄w₹r.jpg)
- ಸೇಂಟ್ ಮೇರಿಸ್ ದ್ವೀಪ : ಉಡುಪಿ ಎಂದ ಕೂಡಲೇ ಮಲ್ಪೆ ಬೀಚ್ ನೆನಪಿಗೆ ಬರುತ್ತದೆ. ಆದರೆ ಈ ಕಡಲ ತೀರ ಪ್ರದೇಶದಲ್ಲೆ ಕಂಡುಬರುವ ಸೇಂಟ್ ಮೇರಿಸ್ ದ್ವೀಪವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಈ ದ್ವೀಪದಲ್ಲಿ ಬಸಾಲ್ಟ್ ಶಿಲಾ ರಚನೆಗಳಿದ್ದು, ಜ್ವಾಲಾಮುಖಿಯಿಂದ ರೂಪಿತವಾದ ರಚನೆಗಳು ಎನ್ನಲಾಗಿದೆ. ಇಲ್ಲಿಗೆ ನೂರಾರು ಪ್ರವಾಸಿಗರು ಭೇಟಿ ನೀಡುವ ಮೂಲಕ ಪ್ರಕೃತಿಯ ಅಚ್ಚರಿಯನ್ನು ಕಣ್ತುಂಬಿಸಿಕೊಳ್ಳುತ್ತಾರೆ.
![](https://guaranteenews.com/wp-content/uploads/2024/09/St._Marys_Island.jpg)
- ಯಾಣ : ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ 25 ಕಿ.ಮೀ ದೂರದಲ್ಲಿರುವ ಯಾಣ ಎಂಬ ಹಳ್ಳಿಯಲ್ಲಿ ಶಿಲೆಗಳ ಎರಡು ಶಿಖರಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಎರಡು ಶಿಖರಗಳಿಗೆ ಒಂದಕ್ಕೆ ಭರವೇಶ್ವರ ಶಿಖರ ಎಂದು ಕರೆದರೆ ಇನ್ನೊಂದನ್ನು ಮೋಹಿನಿ ಶಿಖರ ಎಂದು ಕರೆಯಲಾಗುತ್ತದೆ. ಹಚ್ಚ ಹಸಿರಿನಿಂದ ಕೂಡಿದ ಪ್ರಕೃತಿಯಿಂದ ಸುತ್ತುವರೆದಿರುವ ಈ ಬೆಟ್ಟಗಳು ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ.
![](https://guaranteenews.com/wp-content/uploads/2024/09/ytrwrt.jpg)
- ಮೆಗಾಲಿಥಿಕ್ ಕಲ್ಲು : ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಹತ್ತು ಕಿ.ಮೀ ದೂರದಲ್ಲಿರುವ ಮೆಗಾಲಿಥಿಕ್ ಕಲ್ಲು ಈ ಪ್ರದೇಶವು ಪುರಾತನವಾದ ತಾಣಗಳಲ್ಲಿ ಒಂದಾಗಿದೆ. ಬೆಟ್ಟಗಳಲ್ಲಿರುವ ಹಲವಾರು ಬಂಡೆಗಳನ್ನು ಉಪಯೋಗಿಸಿ ನಿರ್ಮಿಸಲಾಗಿರುವ ಶಿಲಾ ರಚನೆಗಳಾಗಿದ್ದು ಇದನ್ನು ನೋಡಲು ಕಣ್ಣುಗಳೇ ಸಾಲದು.
![](https://guaranteenews.com/wp-content/uploads/2024/09/qw₹erf.jpg)