ಬಣ್ಣದ ಲೋಕದಲ್ಲಿ ಯಮುನಾ ಶ್ರೀನಿಧಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ, ಕಿರುತೆರೆ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಹಲವು ಸೀರಿಯಲ್ಗಳಲ್ಲಿ ನಟಿಸಿದ್ದಾರೆ. ಅವರು ಭರತನಾಟ್ಯ ಡ್ಯಾನ್ಸರ್ ಕೂಡ ಹೌದು. ಭರತನಾಟ್ಯದಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಅನೇಕರಿಗೆ ಭರತನಾಟ್ಯವನ್ನು ಕಲಿಸಿದ್ದಾರೆ. ‘ಅಶ್ವಿನಿ ನಕ್ಷತ್ರ’, ‘ಅಮೃತ ವರ್ಷಿಣಿ’, ‘ತ್ರಿವೇಣಿ ಸಂಗಮ’, ‘ಕಮಲಿ’, ‘ಮನಸಾರೆ’ ಮುಂತಾದ ಸೀರಿಯಲ್ಗಳಲ್ಲಿ ಯಮುನಾ ಶ್ರೀನಿಧಿ ಅವರು ನಟಿಸಿದ್ದಾರೆ. ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಅವರು 2ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.
‘ಕಳೆದ 10 ವರ್ಷಗಳಿಂದ ಜೀವನದಲ್ಲಿ ಒಂದು ಜಡತ್ವ ಹಿಡಿದಿದೆ. ಏನೂ ಚಾಲೆಂಜಿಂಗ್ ಆಗಿ ಮಾಡಿಲ್ಲ. ಅದಕ್ಕಾಗಿ ಬಿಗ್ ಬಾಸ್ಗೆ ಬಂದಿದ್ದೇನೆ. ಮಗಳು ಹೇಳಿದ್ದಕ್ಕೆ ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಯಮುನಾ ಶ್ರೀನಿಧಿ ಅವರು ಹೇಳಿದ್ದಾರೆ. ಕಿರುತೆರೆ ನಟಿ ಭವ್ಯಾ ಗೌಡ ಅವರ ಜೊತೆ ಬಿಗ್ ಬಾಸ್ ವೇದಿಕೆಗೆ ಬಂದರು. ‘ನನ್ನ ವಯಸ್ಸನ್ನು ನೋಡಿದರೆ, ಇಷ್ಟು ವರ್ಷಗಳ ಅನುಭವ ಇದೆ. ನನಗೆ ತಾಳ್ಮೆ ಕೂಡ ಇರುತ್ತದೆ. ಮೊದಲು ನಾನು ಶಾರ್ಟ್ಪೆಂಟರ್ ವ್ಯಕ್ತಿ ಆಗಿದ್ದೆ. ನನಗೆ ಒಸಿಡಿ ಇದೆ’ ಎಂದು ತಮ್ಮನ್ನು ತಾವು ಯಮುನಾ ಪರಿಚಯಿಸಿಕೊಂಡರು.
ಭವ್ಯಾ ಗೌಡ ಮತ್ತು ಯಮುನಾ ಶ್ರೀನಿಧಿ ಅವರು ಪರಸ್ಪರ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದರು. ಯಾರು ಸ್ಪರ್ಗಕ್ಕೆ ಹೋಗುತ್ತಾರೆ? ಯಾರು ನರಕಕ್ಕೆ ಹೋಗುತ್ತಾರೆ ಎಂಬ ಪ್ರಶ್ನೆ ಕೇಳಲಾಯಿತು. ‘ನನಗೆ ನರಕಕ್ಕೆ ಹೋಗೋಕೆ ಇಷ್ಟ. ಯಾಕೆಂದರೆ, ನಾನು ಕಂಫರ್ಟ್ ಝೋನ್ನಿಂದ ಹೊರಗೆ ಬರಬೇಕು’ ಎಂದರು ಯಮುನಾ ಶ್ರೀನಿಧಿ. ವೇದಿಕೆಯಲ್ಲಿ ಸುದೀಪ್ ಅವರು ಭವ್ಯಾ ಮತ್ತು ಯಮುನಾಗೆ ಒಂದು ವಿಶೇಷ ಅವಕಾಶ ನೀಡಿದರು. ಮೊದಲು ದೊಡ್ಮನೆಗೆ ಕಾಲಿಡುತ್ತಿರುವ ಈ ಇಬ್ಬರು ಸ್ಪರ್ಧಿಗಳಿಗೆ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ನೀಡಲಾಯಿತು.
ಮುಂಬರುವ ಸ್ಪರ್ಧಿಗಳನ್ನು ಸ್ವರ್ಗಕ್ಕೆ ಕಳಿಸಬೇಕಾ ಅಥವಾ ನರಕಕ್ಕೆ ಕಳಿಸಬೇಕ ಎಂಬ ಅಧಿಕಾರವನ್ನು ಕೂಡ ಯಮುನಾ ಮತ್ತು ಭವ್ಯಾ ಗೌಡ ಅವರಿಗೆ ಬಿಗ್ ಬಾಸ್ ನೀಡಿದರು. ಹಾಗಾಗಿ ನೇರವಾಗಿ ಅವರನ್ನು ಕನ್ಫೆಷನ್ ರೂಮ್ಗೆ ಕಳಿಸಲಾಯಿತು.