ಬಾಬರ್ ಆಝಂ ನಾಯಕತ್ವದಲ್ಲಿ ಪಾಕಿಸ್ತಾನ್ ತಂಡವು 147 ಪಂದ್ಯಗಳಲ್ಲಿ ಕಣಕ್ಕಿಳಿದಿದೆ. ಈ ವೇಳೆ ಪಾಕ್ ಪಡೆ 83 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 50 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು 4 ಪಂದ್ಯಗಳು ಡ್ರಾ ಆದರೆ, 2 ಮ್ಯಾಚ್ಗಳು ಟೈ ಆಗಿತ್ತು. ಪಾಕಿಸ್ತಾನ್ ತಂಡದ ನಾಯಕತ್ವದಿಂದ ಬಾಬರ್ ಆಝಂ ಕೆಳಗಿಳಿದಿದ್ದಾರೆ. ಈ ಹಿಂದೆಯೇ ಟೆಸ್ಟ್ ತಂಡದ ನಾಯಕತ್ವದಿಂದ ರಾಜೀನಾಮೆ ನೀಡಿದ್ದ ಬಾಬರ್ ಇದೀಗ ಟಿ20 ಹಾಗೂ ಏಕದಿನ ತಂಡಗಳ ಕ್ಯಾಪ್ಟನ್ಸಿಯನ್ನು ತ್ಯಜಿಸಿದ್ದಾರೆ. ಇದರೊಂದಿಗೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ತಂಡವನ್ನು ಹೊಸ ನಾಯಕ ಮುನ್ನಡೆಸುವುದು ಖಚಿತವಾಗಿದೆ.
ಇದಕ್ಕೂ ಮುನ್ನ, 2023 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡದ ಹೀನಾಯ ಪ್ರದರ್ಶನದ ಹಿನ್ನಲೆಯಲ್ಲಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಅಲ್ಲದೆ ಟಿ20 ತಂಡ ಹಾಗೂ ಏಕದಿನ ತಂಡಗಳಿಗೆ ಶಾಹೀನ್ ಅಫ್ರಿದಿಯನ್ನು ಹಾಗೂ ಟೆಸ್ಟ್ ಕ್ರಿಕೆಟ್ಗೆ ಶಾನ್ ಮಸೂದ್ ಅವರನ್ನು ಹೊಸ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು. ಅದರಂತೆ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಶಾಹೀನ್ ಅಫ್ರಿದಿ ನಾಯಕತ್ವದಲ್ಲಿ ಕಣಕ್ಕಿಳಿದ ಪಾಕಿಸ್ತಾನ್ ತಂಡವು 4-1 ಅಂತರದಿಂದ ಸೋಲನುಭವಿಸಿತ್ತು. ಇದರ ಬೆನ್ನಲ್ಲೇ ಶಾಹೀನ್ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿ 2024ರ ಟಿ20 ವಿಶ್ವಕಪ್ಗೂ ಮುನ್ನ ಬಾಬರ್ ಆಝಂ ಅವರನ್ನು ಮತ್ತೆ ನಾಯಕನಾಗಿ ನೇಮಿಸಲಾಯಿತು.
ಆದರೆ ಟಿ20 ವಿಶ್ವಕಪ್ನಲ್ಲಿ ಬಾಬರ್ ಆಝಂ ಮುಂದಾಳತ್ವದಲ್ಲಿ ಕಣಕ್ಕಿಳಿದ ಪಾಕ್ ಪಡೆಯು ಯುಎಸ್ಎ ವಿರುದ್ದ ಪರಾಜಯಗೊಳ್ಳುವ ಮೂಲಕ ಭಾರೀ ಮುಖಭಂಗಕ್ಕೊಳಗಾಗಿತ್ತು. ಅಲ್ಲದೆ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಹೀಗಾಗಿ ಬಾಬರ್ ಆಝಂ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಬಹುತೇಕ ಖಚಿತ ಎನ್ನಲಾಗಿತ್ತು. ಅದರಂತೆ ಇದೀಗ ಖುದ್ದು ಬಾಬರ್ ಆಝಂ ಟಿ20 ಹಾಗೂ ಏಕದಿನ ತಂಡಗಳ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಮೂಲಕ ಇನ್ಮುಂದೆ ಕೇವಲ ಆಟಗಾರನಾಗಿ ತಂಡದಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಸರಣಿಗೂ ಮುನ್ನ ಪಾಕಿಸ್ತಾನ್ ತಂಡಕ್ಕೆ ಹೊಸ ನಾಯಕ ಆಯ್ಕೆಯಾಗುವ ಸಾಧ್ಯತೆಯಿದೆ.
ಇಲ್ಲಿ ಪಾಕಿಸ್ತಾನ್ ತಂಡದ ನೂತನ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪಾಕಿಸ್ತಾನ್ ಸೂಪರ್ ಲೀಗ್ ಹಾಗೂ ಚಾಂಪಿಯನ್ಸ್ ಕಪ್ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿರುವ ರಿಝ್ವಾನ್ ನಾಯಕತ್ವದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ಅವರಿಗೆ ಕ್ಯಾಪ್ಟನ್ ಪಟ್ಟ ಸಿಗುವ ಸಾಧ್ಯತೆಯಿದೆ.
ಬಾಬರ್ ಆಝಂ ಪಾಕಿಸ್ತಾನ್ ತಂಡವನ್ನು 147 ಪಂದ್ಯಗಳಲ್ಲಿ ಮುನ್ನಡೆಸಿದ್ದಾರೆ. ಈ ವೇಳೆ ಪಾಕ್ ಪಡೆ 83 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 50 ಮ್ಯಾಚ್ಗಳಲ್ಲಿ ಸೋಲನುಭವಿಸಿದೆ. ಇನ್ನು 4 ಪಂದ್ಯಗಳು ಡ್ರಾ ಆದರೆ, 2 ಮ್ಯಾಚ್ಗಳು ಟೈ ಆಗಿತ್ತು. ಹಾಗೆಯೇ 8 ಪಂದ್ಯಗಳು ಫಲಿತಾಂಶರಹಿತವಾಗಿ ಕೊನೆಗೊಂಡಿತ್ತು. ಈ ಅಂಕಿ ಅಂಶಗಳ ಪ್ರಕಾರ ಬಾಬರ್ ಆಝಂ ಪಾಕಿಸ್ತಾನ್ ತಂಡದ ಯಶಸ್ವಿ ನಾಯಕರಲ್ಲಿ ಒಬ್ಬರು. ಇದಾಗ್ಯೂ ಅವರ ನಾಯಕತ್ವದಲ್ಲಿ ಪಾಕಿಸ್ತಾನ್ ತಂಡವು ಈವರೆಗೆ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಾಯಕತ್ವ ಬದಲಿಸಲು ಪಿಸಿಬಿ ಮುಂದಾಗಿದೆ.