ಇನ್ನುಮುಂದೆ ಕನ್ನಡದಲ್ಲೇ ರೈಲ್ವೆ ಪರೀಕ್ಷೆ ನಡೆಸುವುದಾಗಿ ದಾವಣಗೆರೆಯಲ್ಲಿ ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರೈಲ್ವೆ ಇಲಾಖೆಯಲ್ಲಿ ಒಟ್ಟು 12 ಲಕ್ಷ ಹುದ್ದೆಗಳಿದ್ದು, 15 ಲಕ್ಷ ಜನರು ಪಿಂಚಣಿ ಪಡೆಯುತ್ತಿದ್ದಾರೆ.
ಖಾಲಿ ಇರುವ 16,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಆದೇಶ ನೀಡಲಾಗಿದ್ದು, ನಮ್ಮ ರಾಜ್ಯದ ಯುವಕರು ಇದರ ಉಪಯೋಗ ಪಡೆದುಕೊಳ್ಳಬೇಕು. ಕನ್ನಡದಲ್ಲೇ ಪರೀಕ್ಷೆ ಬರೆಯಲು ಮತ್ತು ಓದಲು ಪುಸ್ತಕಗಳು ಸಿಗುತ್ತವೆ, ಉಪಯೋಗಿಸಿಕೊಳ್ಳಿ. ಇಲ್ಲ ಇಂಗ್ಲಿಷ್ನಲ್ಲಿ ಇರುವುದನ್ನು ತರ್ಜುಮೆ ಮಾಡಲಾಗುತ್ತದೆ. ಅದನ್ನು ಓದಿ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಖಾಲಿ ಇರುವ 46,000 ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದರು.
ಅಲ್ಲದೇ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು, ಮುಂದಿನ ನಾಲ್ಕೈದು ತಿಂಗಳು ಇದೇ ಆರ್ಥಿಕ ವರ್ಷಾಂತ್ಯದಲ್ಲಿ ಹಲವು ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ನೇರ ರೈಲು ಮಾರ್ಗವು ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಳೆದ ಎರಡೂವರೆಗೆ ತಿಂಗಳಿಂದ ಇದರ ಪ್ರಗತಿ ವೇಗ ಹೆಚ್ಚಿಸಲಾಗಿದೆ. ಒಟ್ಟು ಈ ಯೋಜನೆಗೆ 2406.73 ಎಕರೆ ಭೂಮಿ ಬೇಕಾಗಿದ್ದು, ಈಗಾಗಲೇ 2119.16 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. 287.54 ಎಕರೆ ಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಹಾದುಹೋಗುವ 263.78 ಎಕರೆ ಜಮೀನಿನಲ್ಲಿ 246.20 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು, 17.58 ಎಕರೆಯ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲಿದೆ. ಕೆಲವೇ ದಿನಗಳಲ್ಲಿ ಇದು ಪೂರ್ಣವಾಗಲಿದೆ ಎಂದು ತಿಳಿಸಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಯೋಜನೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವ ಗುರಿ ಹೊಂದಲಾಗಿದೆ. 2027ರ ಜನವರಿಯೊಳಗಾಗಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿದೆ. ರೈಲ್ವೆ ಕಾಮಗಾರಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದಿಂದ ಅಭಿವೃದ್ದಿ ಮಾಡಲಾಗುತ್ತದೆ. ಇದೇ ಆರ್ಥಿಕ ವರ್ಷ ಕೊನೆಯಾಗುವ ವೇಳೆಗೆ ಕನಿಷ್ಠ 4 ರಿಂದ 5 ಕಡೆ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದರು.
ರಾಜ್ಯದಲ್ಲಿ ಒಟ್ಟು 21 ರೈಲ್ವೆ ಯೋಜನೆಗಳು ನಡೆಯುತ್ತಿದ್ದು, ಇದಕ್ಕಾಗಿ 43,000 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಎಲ್ಲಾ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ರಾಜ್ಯವನ್ನು ರೈಲ್ವೆ ಸೌಕರ್ಯ ಹೊಂದಿದ ರಾಜ್ಯವನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಯೋಜನೆಗೆ ಈಗಾಗಲೇ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 115.11.08 ಎಕರೆ ಜಮೀನು ಸ್ವಾಧೀನ ಮಾಡಲಾಗಿದೆ ಎಂದು ಹೇಳಿದರು.