ನವರಾತ್ರಿ ಎಂಟನೇ ದಿನ ಸ್ವರೂಪ ಮಹಾಗೌರೀ ಎಂದಾಗಿರುತ್ತದೆ. ಆಕೆಯ ಬಣ್ಣ ಸಂಪೂರ್ಣವಾಗಿ ಬಿಳಿಯದಾಗಿರುತ್ತದೆ. ಇನ್ನು ಆ ಬಿಳಿಯ ಬಣ್ಣಕ್ಕೆ ಉಪಮೆಯಂತೆ ಶಂಖ, ಚಂದ್ರ ಮತ್ತು ಕುಂದ ಪುಷ್ಪಗಳನ್ನು ಉಲ್ಲೇಖಿಸಲಾಗಿದೆ. ಇನ್ನು ಆ ತಾಯಿಯ ವಯಸ್ಸು ಎಂಟು ವರ್ಷಗಳು ಮಾತ್ರ. “ಅಷ್ಟ ವರ್ಷಾ ಭವೇದ್ ಗೌರೀ” ಎನ್ನಲಾಗುತ್ತದೆ. ಆಕೆ ಧರಿಸಿರುವ ಎಲ್ಲ ವಸ್ತ್ರಗಳು ಹಾಲಿನಷ್ಟು ಬಿಳುಪಾಗಿರುತ್ತವೆ.
ಅಷ್ಟೇ ಅಲ್ಲ, ಆಕೆಯ ಆಭರಣಗಳೂ ಬಿಳಿಯೇ. ಆಕೆಗೆ ನಾಲ್ಕು ಭುಜಗಳು. ಇನ್ನು ಅವಳ ವಾಹನ ವೃಷಭ ಹಾಗೂ ಅದು ಕೂಡ ಬೆಳ್ಳಗಿದೆ. ಆ ತಾಯಿಯ ಬಲಕೈ ಮೇಲು ಭಾಗವು ಅಭಯ ಮುದ್ರೆಯನ್ನು ಪ್ರದರ್ಶಿಸುತ್ತಿದ್ದು, ಕೆಳಗಿನ ಬಲಕೈಯಲ್ಲಿ ತ್ರಿಶೂಲ ಇದೆ. ಅದೇ ರೀತಿ ಎಡಭಾಗದ ಮೇಲು ಕೈನಲ್ಲಿ ಡಮರು ಹಾಗೂ ಕೆಳಗಿನ ಎಡಕೈನಲ್ಲಿ ವರದ ಮುದ್ರೆಯಿದೆ. ಆ ತಾಯಿಯ ಮುದ್ರೆಯು ಶಾಂತವಾಗಿದೆ.
ಆ ಮಹಾದೇವನನ್ನು ಹೊರತುಪಡಿಸಿ ಇನ್ಯಾರನ್ನೂ ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿರುತ್ತಾಳೆ. ಆ ಶಿವನಿಗಾಗಿಯೇ ಕಠಿಣವಾದ ತಪಸ್ಸು ಮಾಡುತ್ತಾಳೆ. ಆ ತಪಸ್ಸಿನ ಕಾರಣಕ್ಕೆ ಆಕೆಯ ಮೈ ಬಣ್ಣ ಕಪ್ಪಾಗಿರುತ್ತದೆ. ಆದರೆ ತಪ್ಪಸ್ಸಿಗೆ ಒಲಿದ ಶಿವನು ಆಕೆಯ ದೇಹವನ್ನು ಗಂಗೆಯ ಪವಿತ್ರ ಜಲದಿಂದ ತೊಳೆಯುತ್ತಾನೆ. ಆಗ ದೇಹ ಪ್ರಕಾಶಮಾನವಾಗಿ ಹೊಳೆಯುತ್ತಾ ಬೆಳ್ಳಗಾಯಿತು.
ಯಾವಾಗ ಈ ರೀತಿ ಆಕೆಯ ಮೈ ಬಣ್ಣವು ಬದಲಾಯಿತೋ ಆಗಿನಿಂದ ಅವಳ ಹೆಸರು ಗೌರಿ ಎಂದು ಬದಲಾಯಿತು. ಶರನ್ನವರಾತ್ರಿಯ ಎಂಟನೇ ದಿನದಂದು ಮಹಾಗೌರೀ ಆರಾಧನೆ ಮಾಡುವುದರಿಂದ ಸಕಲ ಸಂಚಿತ ಪಾಪಗಳು ನಿವಾರಣೆ ಆಗುತ್ತವೆ. ಅಷ್ಟೇ ಅಲ್ಲ, ಅಲ್ಲಿಂದ ಮುಂದೆ ಪಾಪ- ಸಂತಾಪ, ದುಃಖ ದೈನ್ಯಾದಿಗಳು ಬರುವುದಿಲ್ಲ. ಯಾರು ಆ ದೇವಿಯನ್ನು ಶ್ರದ್ಧಾ- ಭಕ್ತಿಯಿಂದ ಆರಾಧನೆ ಮಾಡುತ್ತಾರೋ ಎಂದಿಗೂ ಕರಗದ ಪುಣ್ಯಕ್ಕೆ ಅಧಿಪತಿಗಳಾಗುತ್ತಾರೆ.
ಆ ಮಹಾಗೌರೀ ವಿಶೇಷ ಏನೆಂದರೆ, ಯಾರೂ ಏಕಾಗ್ರತೆಯಿಂದ ಆಕೆಯನ್ನು ಧ್ಯಾನ ಮಾಡುತ್ತಾರೋ ಅಂಥವರಿಗೆ ಅಲೌಕಿಕ ಸಿದ್ಧಿಗಳು ಪ್ರಾಪ್ತಿ ಆಗುತ್ತವೆ. ಭಕ್ತರ ಅದೆಂಥದ್ದೇ ಕಷ್ಟಗಳಿದ್ದರೂ ಅವಳು ದೂರ ಮಾಡುತ್ತಾಳೆ. ಯಾವ ಕೆಲಸ ಆಗುವುದೇ ಇಲ್ಲ ಎಂದು ಭಕ್ತರು ಎಂದುಕೊಂಡಿರುತ್ತಾರೋ ಅಂಥವು ಸಹ ಸರಾಗವಾಗಿ ಆಗುತ್ತವೆ. ಪುರಾಣಗಳಲ್ಲಿ ಈ ದೇವಿಯ ಮಹಿಮೆಯನ್ನು ತುಂಬ ಚೆನ್ನಾಗಿ ವಿವರಿಸಲಾಗಿದೆ.
ಮನುಷ್ಯರಲ್ಲಿ ಇರುವಂಥ ಪ್ರವೃತ್ತಿಯನ್ನು ಉತ್ತಮದ ಕಡೆಗೆ ಒಯ್ಯುವ ಹಾಗೂ ಸಾಗುವ ಕಡೆಗೆ ಮನಸ್ಸು ನೀಡುವವಳು ಅದೇ ಮಹಾಗೌರೀ. ಆದ್ದರಿಂದ ಆ ದೇವಿಯಲ್ಲಿ ಶರಣಾಗತರಾಗಬೇಕು. ಹೀಗೊಂದು ಶರಣಾಗತ ಭಾವ ಮೂಡುವುದರಿಂದ ಆ ದೇವಿಯೇ ನಮ್ಮನ್ನು ರಕ್ಷಿಸುತ್ತಾಳೆ, ಪೊರೆಯುತ್ತಾಳೆ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯುವುದಕ್ಕೆ ಪ್ರೇರಣೆ ಸಹ ನೀಡುತ್ತಾಳೆ.