ಬೆಳಗಾವಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕರ್ನಾಟಕದ ಆದಿಶಕ್ತಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ಹೊತ್ತಿನಲ್ಲೇ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಭಾವಚಿತ್ರ ಇರೋ ಬ್ಯಾನರ್ ಅಳವಡಿಕೆ ಮಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಎಷ್ಟು ಚರ್ಚೆಯಾಗುತ್ತಿದೆಯೋ, ಮುಂದಿನ ಮುಖ್ಯಮಂತ್ರಿ ಸತೀಶ ಜಾರಕಿಹೊಳಿ ಎನ್ನುವುದೂ ಕೂಡ ಜೋರಾಗಿ ಸದ್ದು ಮಾಡುತ್ತಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ‘ಭವಿಷ್ಯದ ಮುಖ್ಯಮಂತ್ರಿ’ ಎಂದು ಬ್ಯಾನರ್ ಅಳವಡಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಸಿದ್ಧರಾಮಯ್ಯ ಅವರು ಬೆಳಗಾವಿ ಭೇಟಿಯ ಸಂದರ್ಭದಲ್ಲೇ ರಸ್ತೆಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಭವಿಷ್ಯದ ಮುಂದಿನ ಮುಖ್ಯಮಂತ್ರಿ ಎನ್ನುವಂತ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸಿ, ಕುತೂಹಲ ಕೆರಳಿಸಿದವು.
ಬ್ಯಾನರ್ ಅಳವಡಿಸಿರುವ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಈ ಕುರಿತು ಪ್ರತಿಕ್ರಿಯಿಸಿದ್ದು, ”ಒಂದು ವೇಳೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಪ್ರಸಂಗ ಒದಗಿ ಬಂದರೆ ಸತೀಶ ಜಾರಕಿಹೊಳಿ ಅವರನ್ನೇ ಸಿಎಂ ಮಾಡಬೇಕು. ಇದರಿಂದ ಇಡೀ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಬ್ಯಾನರ್ ಬರೆಸಿದ್ದೇವೆ” ಎಂದು ಹೇಳಿದರು.
ಇತ್ತೀಚೆಗೆ, ಸತೀಶ ಜಾರಕಿಹೊಳಿ ವಿವಿಧ ಸಚಿವರ ಜೊತೆಗೆ ಸಭೆಗಳನ್ನು ನಡೆಸಿರುವುದು ಹಾಗೂ ದೆಹಲಿ ಪ್ರವಾಸದಿಂದಾಗಿ ಅವರು ಸಿಎಂ ರೇಸ್ನಲ್ಲಿದ್ದಾರೆ ಎಂಬುದು ಚರ್ಚೆಯಾಗಿತ್ತು. ಬಳಿಕ ಸ್ಪಷ್ಟನೆ ನೀಡಿದ್ದ ಅವರು, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ತಾವು 2028ರಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದರು.