ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ರಣಭೀಕರ ಮಳೆ ಬೀಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು. ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಚೆನ್ನೈ, ತಿರುವಲ್ಲೂರು, ಕಾಂಚಿಪುರಂ ಹಾಗೂ ಚೆಂಗಲಪಟ್ಟುಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು. ಅಕ್ಟೋಬರ್ 18 ವರೆಗೆ ಶಾಲಾ ಕಾಲೇಜ್ಗಳನ್ನು ಬಂದ್ ಇಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯದಲ್ಲಿರುವ ಎಲ್ಲಾ ಐಟಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಅಕ್ಟೋಬರ್ 18ರವರೆಗೆ ಯಾವ ಕಂಪನಿಗಳೂ ಕೂಡ ಕಚೇರಿಯನ್ನು ತೆರೆಯುವಂತಿಲ್ಲ. ಅಲ್ಲಿಯವರೆಗೂ ಎಲ್ಲ ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅಳವಡಿಸಿಕೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
ಇನ್ನು ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮಳೆಯಿಂದ ಆಗಲಿರುವ ಅನಾಹುತಗಳನ್ನು ಸಮರ್ಪಕವಾಗಿ ಎದುರಿಸಲು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲು ತಿಳಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳಲ್ಲಿ ತಮಿಳುನಾಡಿನ ಹಲವೆಡೆ ರಣಭೀಕರ ಮಳೆ ಬೀಳಲಿದ್ದು. ಮುನ್ನೆಚ್ಚರಿಕೆವಹಿಸುವಂತೆ ಸೂಚಿಸಿದೆ. ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ತಮಿಳುನಾಡು , ಪಾಂಡಿಚೆರಿ ಹಾಗೂ ಆಂಧ್ರಪ್ರದೇಶದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಲವು ಅಧಿಕಾರಿಗಳೊಂದಿಗೆ ಸಬೆ ನಡೆಸಿದರು. ಭೀಕರ ಮಳೆಯನ್ನು ಸಮರ್ಥವಾಗಿ ಎದುರಿಸುವ ಸಿದ್ಧತೆಗಳ ಕುರಿತಾಗಿ ಚರ್ಚೆ ನಡೆಸಿದರು. ಇದೇ ಸಭೆಯಲ್ಲಿ ಹಾಜರಿದ್ದ, ಚೆನ್ನೈ ಮಹಾನಗರ ಪಾಲಿಕೆ ಕಮಿಷನರ್, ಈಗಾಗಲೇ 990 ಪಂಪ್ಸ್, 57 ಟ್ರ್ಯಾಕ್ಟರ್ಗಳನ್ನು ಸಿದ್ಧವಾಗಿಟ್ಟುಕೊಂಡಿದ್ದೇವೆ. ಅದರ ಜೊತೆಗೆ 36 ಮೋಟಾರ್ಬೋಟ್, 46 ಮೆಟ್ರಿಕ್ ಟನ್ ಬ್ಲೀಚ್ ಪೌಡರ್ ಹಾಗೂ 25 ಮೆಟ್ರಿಕ್ ಟನ್ ಲೈಮ್ ಪೌಡರ್ಗಳನ್ನು ಸಿದ್ಧವಾಗಿರಿಸಿಕೊಂಡಿದ್ದೇವೆ. ಎಂತಹ ಸ್ಥಿತಿಯನ್ನು ಕೂಡ ಎದುರಿಸಲು ಪಾಲಿಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ.