ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆ ಹಿನ್ನೆಲೆಯಲ್ಲಿ ಇಂದು ತಡರಾತ್ರಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ನೇತೃತ್ವ ಹೊಂದಿರುವ ವೇಣುಗೋಪಾಲ್ ಬೆಂಗಳೂರಿನಲ್ಲಿ ಈ ಬಾರಿಯ ಪಿಎಸಿ ಸಭೆ ಆಯೋಜಿಸಿದ್ದು, ಬುಧವಾರ ಈ ಸಭೆ ನಡೆಯಲಿದೆ. ವೇಣುಗೋಪಾಲ್ ಅವರು ಪಿಎಸಿ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ರಾಜ್ಯಕ್ಕೆ ಆಗಮಿಸುತ್ತಿದ್ದರೂ ತಮ್ಮ ಭೇಟಿ ವೇಳೆ ಅವರು ರಾಜ್ಯ ನಾಯಕರನ್ನು ಅನೌಪಚಾರಿಕವಾಗಿ ಭೇಟಿಯಾಗಲಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗಳು, ದಲಿತ ಮುಖ್ಯಮಂತ್ರಿ ಕೂಗು, ಸಚಿವರ ಪ್ರತ್ಯೇಕ ಸಭೆಗಳ ನಿಯಂತ್ರಣಕ್ಕೆ ಇತ್ತೀಚೆಗಷ್ಟೇ ಕೈಗೊಂಡಿರುವ ಕ್ರಮಗಳು, ಮುಡಾ ಪ್ರಕರಣದಲ್ಲಿ ಇ.ಡಿ. ಪ್ರವೇಶ, ಮುಡಾ ಪ್ರಕರಣದ ಮುಂದಿನ ಬೆಳವಣಿಗೆಗಳ ಬಗ್ಗೆ ರಾಜ್ಯ ನಾಯಕರು ವೇಣುಗೋಪಾಲ್ ಅವರೊಂದಿಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರ ಪ್ರತ್ಯೇಕ ಸಭೆ, ಅಶಿಸ್ತಿನ ವರ್ತನೆ ಬಗ್ಗೆ ಇತ್ತೀಚೆಗಷ್ಟೇ ಹೈಕಮಾಂಡ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸಚಿವರಿಗೆ ಬಹಿರಂಗ ಹೇಳಿಕೆ, ಪ್ರತ್ಯೇಕ ಸಭೆ ನಡೆಸದಂತೆ ತಾಕೀತು ಮಾಡಿದ್ದರು. ಅ.10 ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದರು. ಬಳಿಕ ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಈ ಎಲ್ಲಾ ವಿಚಾರದ ಬಗ್ಗೆ ಮಾಹಿತಿ ಪಡೆದು ರಾಜ್ಯ ರಾಜಕೀಯ ಸ್ಥಿತಿಯನ್ನು ವೇಣುಗೋಪಾಲ್ ಪರ್ಯಾಲೋಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.