ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ತಿರಸ್ಕರಿಸಿದ ಬೆನ್ನಲ್ಲೇ ಜಾಮೀನುಗಾಗಿ ದರ್ಶನ್ ಹೈಕೋರ್ಟ್ ಮೊರೆಹೋಗಿದ್ದಾರೆ. ಜಾಮೀನು ಮಂಜೂರು ಮಾಡಬೇಕು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತ ಜಾಮೀನು ಅರ್ಜಿಯನ್ನು ದರ್ಶನ್ ಪರ ವಕೀಲ ಎಸ್. ಸುನಿಲ್ ಕುಮಾರ್ ಮಂಗಳವಾರ ಮಧ್ಯಾಹ್ನ 300 ಪುಟಗಳಿಗೂ ಅಧಿಕ ದಸ್ತಾವೇಜಿನ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ಗೆ ಸಲ್ಲಿಸಿದ್ದಾರೆ.
ಮೆರಿಟ್ ಆಧಾರದಲ್ಲಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿರುವ ದರ್ಶನ್, ತನ್ನ ಆರೋಗ್ಯ ಸಮಸ್ಯೆಗಳನ್ನು ಅರ್ಜಿಯಲ್ಲಿ ವಿವರಿಸಿದ್ದಾರೆ. ತುರ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವನ್ನೂ ಪ್ರತಿಪಾದಿಸಿದ್ದಾರೆ. ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ತಡವಾಗಿ ಮಾಡಿಕೊಳ್ಳಲಾಗಿದೆ. ಶವ ಪರೀಕ್ಷೆಯನ್ನು ಸಹ ವಿಳಂಬವಾಗಿ ಮಾಡಲಾಗಿದೆ. ಪ್ರತ್ಯಕ್ಷ ಸಾಕ್ಷಿದಾರರನ್ನು ತನಿಖಾಧಿಕಾರಿಗಳೇ ಸೃಷ್ಟಿಮಾಡಿದ್ದಾರೆ. ಅವರ ಹೇಳಿಕೆಗಳು ತದ್ವಿರುದ್ಧವಾಗಿದ್ದರೂ, ಅದನ್ನು ಪರಿಗಣಿಸುವಲ್ಲಿ ಸೆಷನ್ಸ್ ನ್ಯಾಯಾಲಯ ವಿಫಲವಾಗಿದೆ. ಪೊಲೀಸರು ತನಿಖೆಯ ವೇಳೆಯಲ್ಲಿ ವಶಕ್ಕೆ ಪಡೆದಿರುವ ವಸ್ತುಗಳೆಲ್ಲಾ ಅವರೇ ಯೋಜಿಸಿ ಯಾರು ಮಾಡಿದ್ದಾರೆ ಎಂದು ಅಕ್ಷೇಪಿಸಿದ್ದಾರೆ. ಜೊತೆಗೆ ಕರೆಗಳನ್ನು ಮಾಡಿ ಸಂಚು ರೂಪಿಸಲಾಗಿದೆ ಎಂಬ ತನಿಖಾಧಿಕಾರಿಗಳ ಆರೋಪ ಸುಳ್ಳು. ಹಾಗೆಯೇ, ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದು, ಅಗತ್ಯ ಚಿಕಿತ್ಸೆ ಪಡೆಯಲು ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಅರ್ಜಿಯಲ್ಲಿ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.