ಚಿಕ್ಕಮಗಳೂರು: ಇದು ಪ್ರವಾಸಿಗರ ಪಾಲಿನ ಸ್ವರ್ಗ. ನಗರ ಪ್ರದೇಶಗಳಲ್ಲಿ ನಿತ್ಯ ಜಂಜಾಟದ ಬದುಕಿನ ಮಧ್ಯೆ ಈ ಹೆಸರು ಕೇಳಿದ್ರೇ ಒಂಥರಾ ಪುಳಕ. ಆದರೆ ಈಗ ಆ ಪುಳಕಕ್ಕೆ ಪೆಟ್ಟು ಬೀಳೋ ಲಕ್ಷಣಗಳು ಗೋಚರಿಸ್ತಿವೆ. ಇದಕ್ಕೆ ಕಾರಣ ಜಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ ನೀಡಿರೋ ಒಂದು ವರದಿ.
ರಾಜ್ಯ ಸರ್ಕಾರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭೂಮಿಯ ಸ್ಥಿತಿಗತಿಯನ್ನ ಸರ್ವೇ ಮಾಡಿ ವರದಿ ಕೊಡುವಂತೆ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾಗೆ ಸೂಚನೆ ನೀಡಿತ್ತು. ಅದ್ರಂತೆ ಚಿಕ್ಕಮಗಳೂರು ಜಿಲ್ಲೆಯ 25 ಪ್ರದೇಶಗಳ 88 ಸ್ಥಳಗಳಲ್ಲಿ ಜಿಯೋಲಾಜಿಕಲ್ ವಿಜ್ಞಾನಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ 74 ಪುಟಗಳ ವರದಿ ನೀಡಿದೆ. ಮುಂದಾಗುವ ಅನಾಹುತ ತಡೆಗೆ ಸಲಹೆ ಸೂಚನೆ ನೀಡಿದೆ.
ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲು, ಚಾರ್ಮಾಡಿ ಘಾಟಿಯಲ್ಲಿ ಭಾರೀ ಪ್ರಮಾಣದ ವಾಹನಗಳ ಸಂಚಾರದಿಂದ ಅನಾಹುತ ಎಂದು ವರದಿ ನೀಡಿದೆ. ಹೀಗಾಗಿ ಪರ್ವತದ ಸಾಲು ರಕ್ಷಿಸಲು ಜಿಲ್ಲಾಡಳಿತ ಮುಂದಾಗಿದ್ದು, ಪ್ರವಾಸೋದ್ಯಮ ಇಲಾಖೆ ಜೊತೆ ಸಭೆ ನಡೆಸಿ ವಾಹನಗಳ ದಟ್ಟಣೆ ತಡೆಗೆ ಪ್ಲಾನ್ ಮಾಡಿದೆ. ಇನ್ನೂ ಕೊಪ್ಪ ತಾಲೂಕಿನ ಗುಡ್ಡೆತೋಟ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಡೇಂಜರಸ್ ಪಟ್ಟಿಯಲ್ಲಿದ್ದು ಆ ಪ್ರದೇಶದಲ್ಲಿರುವ ಜನರನ್ನ ಸ್ಥಳಾಂತರ ಮಾಡುವ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
ದಟ್ಟ ಕಾನನದಲ್ಲಿ ಅವೈಜ್ಞಾನಿಕ ಕಾಮಗಾರಿಗಳು ಪ್ರಕೃತಿ ವಿರೋಧಿ ಕಾರ್ಯಚಟುವಟಿಕೆಗಳಿಂದ ಕಂಟಕ ಮಾತ್ರ ತಪ್ಪಿದ್ದಲ್ಲ. ಸರ್ಕಾರ ಜಿಯೋಲಜಿಕಲ್ ಸರ್ವೇ ಆಫ್ ಇಂಡಿಯಾ, ವರದಿಯನ್ನ ಕಾರ್ಯಗತಗೊಳಿಸುತ್ತಾ ಅಥವಾ ಅದೂ ಕೂಡ ಇತರೆ ವರದಿಗಳಂತೆ ಕೇವಲ ಕಡತಕ್ಕೆ ಸೀಮಿತವಾಗುತ್ತಾ ಕಾದುನೋಡಬೇಕು.