ರಾಜ್ಯದಲ್ಲಿ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದೇ ನವೆಂಬರ್ 13ಕ್ಕೆ ನಡೆಯಲಿದ್ದು, ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣೆ ದಿನಾಂಕ ಘೋಷಣೆ ಆಗ್ತಿದ್ದಂತೆ ಮೂರೂ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದ್ದು, ತಮ್ಮ ಸ್ಥಾನವನ್ನು ಹೆಚ್ಚಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದೆ.
ಈತನ್ಮಧ್ಯೆ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೂರೂ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ತಂತ್ರ ರೂಪಿಸಿದ್ದಾರೆ. ಇದರ ಮೊದಲ ಭಾಗವಾಗಿ ಡಿಕೆ ಶಿವಕುಮಾರ್ ಅವರು, ಅಭ್ಯರ್ಥಿಗಳ ಜಾತಕ ಹಿಡಿದುಕೊಂಡು ಜ್ಯೋತಿಷಿಯ ಮನೆ ಬಾಗಿಲು ತಟ್ಟೋಕೆ ಮುಂದಾಗಿದ್ದಾರೆ.
ಡಿಕೆ ಶಿವಕುಮಾರ್ ಯಾವುದೇ ಕೆಲಸ ಮಾಡುವುದಿದ್ದರೂ, ಅದು ವೈಯಕ್ತಿಕ, ರಾಜಕೀಯ ಅಥವಾ ವ್ಯವಹಾರ ಯಾವುದೇ ಇದ್ದರೂ ಎಲ್ಲವನ್ನೂ ಜ್ಯೋತಿಷಿಗಳ ಲೆಕ್ಕಾಚಾರಗಳ ಮೇಲೆಯೇ ಮಾಡುತ್ತಾರೆ. ಶುಭ ಕಾರ್ಯಕ್ರಮಗಳನ್ನು ಜ್ಯೋತಿಷಿಗಳ ಬಳಿ ಸಲಹೆ ಕೇಳಿ ಪೂಜೆ ಪುನಸ್ಕಾರಗಳ ಜೊತೆಗೆ ಮಾಡುತ್ತಾರೆ. ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕೂಡ ಬಹುತೇಕ ಅಭ್ಯರ್ಥಿಗಳ ಜಾತಕ ಪರಿಶೀಲಿಸಿಯೇ ಟಿಕೆಟ್ ನೀಡಿದ್ದರು. ಇದೀಗ ಉಪ ಚುನಾವಣೆಯಲ್ಲೂ ಸಹ ಅಭ್ಯರ್ಥಿಗಳ ಜಾತಕ ಹಿಡಿದುಕೊಂಡು ಜ್ಯೋತಿಷಿ ಮನೆ ಮುಂದೆ ನಿಂತಿದ್ದಾರೆ.
ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯ ಯೋಗ ಹೇಗಿದೆ? ಗ್ರಹಗತಿ ಚೆನ್ನಾಗಿದೆಯಾ? ಗೆಲ್ಲೋ ಶುಕ್ರದೆಶೆ ಇದೆಯಾ? ಎದುರಾಳಿ ಅಭ್ಯರ್ಥಿ ಮುಂದೆ ನಮ್ಮ ಕ್ಯಾಂಡಿಡೇಟ್ ಸ್ಟ್ರಾಂಗ್ ಅಥವಾ ಡಲ್ ಇದ್ದಾರಾ? ಗೆಲ್ಲುವ ಅವಕಾಶ ಇದೆಯಾ? ಹೀಗೆ ಹತ್ತಾರು ವಿಚಾರಗಳನ್ನು ಇಟ್ಟುಕೊಂಡು ತಮ್ಮ ಹಾಗೂ ವಿರುದ್ದ ಅಭ್ಯರ್ಥಿಯ ಜಾತಕ ನೋಡಿಸುತ್ತಾರೆ. ಜಾತಕ ಕೂಡಿ ಬಂದವರಿಗೆ ಬಹುತೇಕ ಟಿಕೆಟ್ ಫಿಕ್ಸ್ ಮಾಡುತ್ತಾರೆ ಎಂದು ವರದಿಯಾಗಿದೆ.
ಹೀಗಾಗಿ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಅಭ್ಯರ್ಥಿಗಳ ಜಾತಕವನ್ನು ಹಿಡಿದುಕೊಂಡು ಜ್ಯೋತಿಷಿಯ ಸಲಹೆ ಕೇಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಯಾವೆಲ್ಲ ಅಭ್ಯರ್ಥಿಗಳ ಜಾತಕವನ್ನು ಜ್ಯೋತಿಷಿಗೆ ಕೊಟ್ಟಿದ್ದಾರೆ ಅಂತಾ ನೋಡೋದಾದ್ರೆ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ಮತ್ತು ರಘುನಂದನ ರಾಮಣ್ಣ ಅವರ ಜಾತಕವನ್ನು ಕೊಟ್ಟಿದ್ದಾರೆ. ಮತ್ತೊಂದೆಡೆ ಜೆಡಿಎಸ್ನಿಂದ ನಿಖಿಲ್ ಕುಮಾರಸ್ವಾಮಿ, ಜಯಮುತ್ತು ಮತ್ತು ಬಿಜೆಪಿಯ ಸಿ ಪಿ ಯೋಗೇಶ್ವರ್ ಅವರ ಜಾತಕವನ್ನು ಪರಿಶೀಲಿಸಲು ಜ್ಯೋತಿಷಿಗೆ ನೀಡಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಸಂಡೂರು ವಿಧಾನಸಭಾ ಕ್ಷೇತ್ರದಿಂದ, ಇ ತುಕರಾಂ ಅವರ ಪತ್ನಿ ಅನ್ನಪೂರ್ಣ, ಪುತ್ರಿ ಸೌಪರ್ಣಿಕ, ಕೆ ಲಕ್ಷ್ಮಣ್ ಮತ್ತು ಬಿಜೆಪಿಯಿಂದ ಶ್ರೀರಾಮುಲು, ಕೆಎಸ್ ದಿವಾಕರ, ವೈ.ಅಣ್ಣಪ್ಪ ಮತ್ತು ಬಂಗಾರು ಹನುಮಂತು ಅವರ ಜಾತಕವನ್ನು ಜ್ಯೋತಿಷಿಗೆ ನೀಡಿದ್ದಾರಂತೆ. ಮತ್ತೊಂದೆಡೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ, ಸಂದೀಪ್ ಪಾಟೀಲ್ ವಕೀಲ, ವಿನೋದ್ ಅಸೂಟಿ, ಸೋಮಣ್ಣ ಬೇವಿನಮರದ, ಆನಂದ ಗಡ್ಡದೇವರ ಮಠ ಅವರ ಜಾತಕವನ್ನು ನೀಡಿದರೆ, ಬಿಜೆಪಿಯಿಂದ ಮುರುಗೇಶ್ ನಿರಾಣಿ, ಭರತ್ ಬೊಮ್ಮಾಯಿ, ಶಶಿಧರ ಯಲಿಗಾರ ಮತ್ತು ಶ್ರೀಕಾಂತ ದುಂಡಿಗೌಡರ ಅವರ ಜಾತಕವನ್ನು ಪರಿಶೀಲಿಸಲು ಜ್ಯೋತಿಷಿಗೆ ನೀಡಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪೈಕಿ ಜ್ಯೋತಿಷಿ ಯಾರ ಜಾತಕವನ್ನು ಪರಿಶೀಲಿಸಿ ಸೂಚನೆ ನೀಡುತ್ತಾರೋ, ಆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.