ವಾಲ್ಮೀಕಿ ನಿಗಮದ ಹಗರಣದಲ್ಲಿ ಜೈಲು ಪಾಲಾಗಿದ್ದ ಬಿ.ನಾಗೇಂದ್ರ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ತಮ್ಮನ್ನ ಈ ಸುಳ್ಳಿನ ಅಲೆಯಲ್ಲಿ ಸಿಲುಕಿಸಿ ಬಂಧನದ ಬಲೆಗೆ ಬೀಳಿಸಿದವರ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪ್ರತೀಕಾರ ತೀರಿಸಿಕೊಳ್ಳೋ ಶಪಥ ಪರಪ್ಪನ ಅಗ್ರಹಾರ ಜೈಲಿನಲ್ಲೇ ಮಾಡಲಾಗಿದೆ. ಕಂಬಿ ಹಿಂದಿನ ಜೀವನ ನೆನೆದಾಗ ಕಣ್ಣೀರು ಉಕ್ಕಿದೆ.
ಪ್ರತೀ ಮಾತಿಗೂ ಕಣ್ಣೀರು, ತಡೆಯಲು ಯತ್ನಿಸಿದ್ದರೂ ಬಿಕ್ಕಿ ಬಿಕ್ಕಿ ಬರುತ್ತಿರೋ ಅಳು, ನಾಯಕರ ಸಮಾಧಾನಕ್ಕೂ ಕಡಿಮೆಯಾಗದ ನೋವು. ವಾಲ್ಮೀಕಿ ನಿಗಮದ ಹಗರಣದಲ್ಲಿ ಜೈಲು ಸೇರಿ ಹೊರಬಂದಿರೋ ಮಾಜಿ ಸಚಿವ ಬಿ. ನಾಗೇಂದ್ರ ಅವರು ಕಣ್ಣೀರು ಹಾಕಿದ್ದಾರೆ.
ಬಳ್ಳಾರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ನಾಗೇಂದ್ರ ಹೀಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಮಗಾದ ಅನ್ಯಾಯ ನೆನೆದು ಕಣ್ಣೀರಿಟ್ಟಿದ್ದಾರೆ. ಈ ನೋವಿಗೆ ಕಾರಣ ತಮ್ಮದಲ್ಲ ತಪ್ಪಿಗೆ ನಾನಿಗೆ ಜೈಲಿಗೆ ಹೋದೇ ಅನ್ನೋದು. ಯಾವುದೇ ತಪ್ಪು ಮಾಡದಿದ್ರೂ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಜೈಲಿಗೆ ಕಳಿಸಿದರು ಎಂದು ಬಿ. ನಾಗೇಂದ್ರ ಕಣ್ಣೀರಿಟ್ಟರು. ನನ್ನ ವಿರುದ್ಧ ಷಡ್ಯಂತ್ರ ಆಗಿದೆ ಅಂತಾ ಆರೋಪಿಸಿದರು. ನಾನು ತಪ್ಪು ಮಾಡಿದ್ದೇನೆ ಎಂದು ಅಂದುಕೊಳ್ಳುತ್ತಾರೆಂದು ತಿಳಿದು ನಾನು ಇದನ್ನು ಪ್ರೂ ಮಾಡಬೇಕು. ಇದರಿಂದ ನಾನು ಹೊರಗೆ ಬರಬೇಕು. ದೋಷಮುಕ್ತನಾಗಿ ಬಂದರೆ ರಾಜಕೀಯದಲ್ಲಿ ಇರುತ್ತೇನೆ. ಇದೆಲ್ಲ ಸುಳ್ಳಿನ ರಾಜಕೀಯ. ದೋಷಮುಕ್ತನಾಗಿ ರಾಜಕೀಯ ಮಾಡ್ತಿದ್ದೀನಿ ಎಂದ ನಾಗೇಂದ್ರ ಈ ಹಗರಣದಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ ಅಂತಾ ಹೇಳಿದ್ರು. ನನ್ನ ವಾಲ್ಮೀಕಿ ಜನಾಂಗಕ್ಕೆ ಹೇಳುವುದು ಇಷ್ಟೇ. ಇದರಲ್ಲಿ ಸಣ್ಣ ಪಾತ್ರವು ನನ್ನದು ಇಲ್ಲ. ಇಡೀ ದೇಶದಲ್ಲೇ ಹಗರಣ ನಡೆದು ಕೇವಲ 3 ತಿಂಗಳಲ್ಲೇ 85 ಕೋಟಿ ವಾಪಸ್ ಪಡೆದಿದ್ದಾರೆ ಎಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ.
ನನ್ನ ಮೇಲೆ ಸುಳ್ಳು ಗೂಬೆ ಕೂರಿಸಿದ ಬಿಜೆಪಿ ನಾಯಕರು
ನಾನು ಜೈಲು ಅನೇಕ ಬಾರಿ ನೋಡಿದ್ದೇನೆ. ಯಾರುನ್ನು ಬಿಡಲ್ಲ. ಯಾವುದಕ್ಕೂ ಹೆದರಲ್ಲ. ಆದರೆ ನನ್ನ ಮೇಲೆ ಸುಳ್ಳು ಗೂಬೆ ಕೂರಿಸಿದ ಬಿಜೆಪಿ ನಾಯಕರ ಹೆಸರೆಲ್ಲ ಜೈಲು ಗೋಡೆ ಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲು ಪಾಲಾಗುತ್ತಾರೆ. ಹೀಗೆ ನಾಗೇಂದ್ರ ಆಕ್ರೋಶ, ಆವೇಶದ ಮಾತುಗಳನ್ನಾಡ್ತಿದ್ರೆ, ಚಪ್ಪಾಳೆ, ಶಿಳ್ಳೆಗಳು ಆ ಮಾತುಗಳನ್ನ ಸ್ವಾಗತಿಸಿತ್ತು. ಪರಪ್ಪನ ಅಗ್ರಹಾರ ಜೈಲಿಂದ ಹೊರಬಂದಿರೋ ನಾಗೇಂದ್ರ ತಮ್ಮನ್ನ ಆರೋಪದ ಸುಳಿಯಲ್ಲಿ ಸಿಲುಕಿಸಿದವರ ವಿರುದ್ಧ ಸಿಡಿದು ನಿಂತಿದ್ದಾರೆ. ಈ ಕೋಪದ ಕಿಡಿ ಬೈ ಎಲೆಕ್ಷನ್ ಹೊತ್ತಲ್ಲೇ ಜ್ವಾಲಾಮುಖಿಯಾಗಿ ಸಿಡಿಯೋ ಸಾಧ್ಯತೆ ಇದೆ. ಇದರ ಕೋಪತಾಪ ಯಾರಿಗೆ ತಟ್ಟುತ್ತೋ ಕಾದುನೋಡಬೇಕು.