ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ ತಕ್ಷಣಕ್ಕೆ ಸಂಪುಟ ಸಭೆಯಲ್ಲಿ ಮಂಡನೆಯಾಗಿ ತೀರ್ಮಾನಗೊಳ್ಳುವುದು ಅನುಮಾನವಾಗಿದೆ.
ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿ ಗಣತಿ ವರದಿಯನ್ನು ಜಾರಿ ಮಾಡಬೇಕು ಎಂದು ಕಾಂಗ್ರೆಸ್ನ ಹಿಂದುಳಿದ ವರ್ಗಗಳ ಶಾಸಕರು, ಸಂಸದರು ಮತ್ತಿತರ ಪ್ರಮುಖರು ಸಭೆ ನಡೆಸಿ ಒತ್ತಡ ತಂದಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಹಿಂದುಳಿದ ವರ್ಗ ಪ್ರತಿನಿಧಿಸುವ ಸಚಿವರು, ಶಾಸಕರು ಇನ್ನಿತರ ನಿಯೋಗದೊಂದಿಗೆ ಸಭೆ ನಡೆಸಿದ್ದರು. ಈ ತಿಂಗಳ 18ರಂದು ನಡೆಯಲಿರುವ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸುವ ಭರವಸೆಯನ್ನೂ ನೀಡಿದ್ದರು.
ಹಾಗಾಗಿ ಇಂದು ನಡೆಯಬೇಕಿದ್ದ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮತ್ತು ಒಳ ಮೀಸಲು ನಿಗದಿ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪ್ರಮುಖ ನೀತಿ ನಿರ್ಧಾರ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಇದರಿಂದ ಜಾತಿ ಗಣತಿ ಬಗೆಗಿನ ಚರ್ಚೆ ಮುಂದಕ್ಕೆ ಹಾಕಲಾಗಿದೆ.
ಇದೀಗ ಅಕ್ಟೋಬರ್ 25ರಂದು ಸಂಪುಟ ಸಭೆಗೆ ದಿನಾಂಕ ನಿಗದಿ ಪಡಿಸಲಾಗಿದ್ದು, ಅಂದಿನ ಸಭೆಯಲ್ಲಿಯೂ ಜಾತಿ ಗಣತಿ ಬಗ್ಗೆ ಪರಾಮರ್ಶಿಸುವ ಕುರಿತಂತೆ ಇನ್ನೂ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಮೂಲಗಳ ಪ್ರಕಾರ, ಜಾತಿ ಗಣತಿಯನ್ನು ವಿರೋಧಿತ್ತಿರುವ ಸಮುದಾಯಗಳು, ವಿಶೇಷವಾಗಿ ವೀರಶೈವ ಲಿಂಗಾಯತರು ಮತ್ತು ಒಕ್ಕಲಿಗರನ್ನು ಮನವೊಲಿಸುವವರೆಗೂ ಬಿಡುಗಡೆ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.