ಸಂಡೂರು ಕ್ಷೇತ್ರಕ್ಕೆ ನಾನು ಆಕಾಂಕ್ಷಿಯೂ ಅಲ್ಲ, ಅಭ್ಯರ್ಥಿಯೂ ಅಲ್ಲ ಎಂದು ಮಾಜಿ ಸಚಿವ ಶ್ರೀರಾಮುಲು ಸ್ಪಷ್ಟನೆ ನೀಡಿದ್ದಾರೆ. ಸಂಡೂರು ಸೇರಿದಂತೆ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗುತ್ತಿದ್ದಂತೆ, ಅಭ್ಯರ್ಥಿಗಳ ಬಗ್ಗೆ ಊಹಾಪೋಹಗಳು ಶುರುವಾಗಿದೆ, ರಾಜಕೀಯ ವಲಯದಲ್ಲಿ ಸಂಡೂರಿನಿಂದ ಶ್ರೀರಾಮುಲು ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಸ್ಪಷ್ಟನೆ ನೀಡಿದ್ದು, ನಾನು ಆಕಾಂಕ್ಷಿಯೂ ಅಲ್ಲ, ಅಭ್ಯರ್ಥಿಯೂ ಅಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪಕ್ಷದ ಸಂಘಟನೆಯಷ್ಟೇ ನನ್ನ ಮುಂದಿನ ಹೆಜ್ಜೆಯಾಗಿರಲಿದೆ, ನಾನು ಸ್ಪರ್ಧೆ ಮಾಡುವ ಕುರಿತು ಯಾವ ಚರ್ಚೆಯೂ ನಡೆಸಿಲ್ಲ, ಕಾರ್ಯಕರ್ತರಲ್ಲಿ ಈ ಕುರಿತು ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸಾಮಾನ್ಯ ಕಾರ್ಯಕರ್ತರಾಗಿ ಸಂಡೂರು ಗೆಲುವಿಗೆ ಶ್ರಮಿಸುತ್ತೇವೆ, ಮತ್ತೆ ಬಳ್ಳಾರಿ ಬಿಜೆಪಿ ಭದ್ರಕೋಟೆಯಾಗಲಿದೆ ಎಂದು ಹೇಳಿದ್ದಾರೆ. ಸಂಡೂರು ಸೇರಿ 3 ಕ್ಷೇತ್ರಗಳಲ್ಲೂ ಗೆಲ್ಲಬೇಕೆಂಬುದೇ ನಮ್ಮ ಗುರಿಯಾಗಿದೆ, ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಕಾಂಗ್ರೆಸ್ ಧೂಳಿಪಟ ಆಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವ ಶ್ರೀರಾಮುಲು ಪೋಸ್ಟ್ ಮಾಡಿದ್ದಾರೆ. ಬಳ್ಳಾರಿಯಿಂದ ಕಾಂಗ್ರೆಸ್ ಗೇಟ್ಪಾಸ್ಗೆ ಸಿದ್ಧವಾಗಿದೆ, ನನ್ನ ಹೆಸರು, ಮೋದಿ ಹೆಸರು ಹೇಳುತ್ತಿರುವ ಕಾಂಗ್ರೆಸ್ ನಾಯಕರಿಗೆ ನನ್ನ ಕಿವಿಮಾತಿದೆ, ಜಮೀರ್ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿಂತರೂ ಈ ಬಾರಿ ಗೆಲುವು ಬಿಜೆಪಿಯದ್ದೇ. ನಮ್ಮ ಕಾರ್ಯಕರ್ತರ ಶಕ್ತಿ ಮುಂದೆ ಕಾಂಗ್ರೆಸ್ ಧೂಳೀಪಟ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.