ಲೋಕಸಭೆ ಚುನಾವಣೆ ವೇಳೆ ಹಾಸನ ಜಿಲ್ಲೆಯಾದ್ಯಂತ ಕೋಟ್ಯಂತರ ರೂಪಾಯಿ ಹಂಚಲಾಗಿದೆ ಎಂದು ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ಹೇಳಿರುವ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಎಂ, ಡಿಸಿಎಂ ನಿರ್ದೇಶನದಂತೆ ಹಣ ಹಂಚಬೇಕು. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 5 ಕೋಟಿ, ಮಾಜಿ ಎಂಎಲ್ ಸಿ ಗೋಪಾಲಸ್ವಾಮಿ 1 ಕೋಟಿ, ನಾನು 1 ಕೋಟಿ ನೀಡುತ್ತೇನೆ, ಒಟ್ಟಾರೆ 7ಕೋಟಿ ಹಂಚಬೇಕು ಎಂದು ಶಾಸಕ ಶಿವಲಿಂಗೇಗೌಡ ತಮ್ಮ ಪಕ್ಷದ ಮುಖಂಡರ ಜೊತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದು ಎನ್ನಲಾಗುತ್ತಿದೆ.
ಪ್ರತಿ ವೋಟಿಗೆ ಐದು ನೂರು ರೂಪಾಯಿ ಕೊಡಬೇಕು. ಒಟ್ಟು ಶೇಕಡಾ 68 ರಿಂದ 70 ಜನರಿಗೆ ಹಣ ಕೊಡಿ. ಯಾರು ನಮಗೆ ಓಟ್ ಹಾಕುತ್ತಾರೆ ಎಂಬುದು ಗೊತ್ತಿರುತ್ತೆ, ಅವರಿಗೆ ಕೊಡಿ. ಅವರು 30 ಪರ್ಸೆಂಟ್ ಮತ ತಗೊತಾರೆ ಅವರಿಗೆ ಕೊಡೋದು ಬೇಡ. ಸಿಎಂ, ಡಿಸಿಎಂ, ಉಸ್ತುವಾರಿ ಅವರೇ ತೀರ್ಮಾನ ಮಾಡಿದ್ದಾರೆ, ಅದರಂತೆ ಹಂಚಲಿ. ಶಿವರಾಂ ಅವರು ಮನೆಗೊಂದು ಸಾವಿರ ಕೊಡುತ್ತಾ ಇದ್ದಾರಂತೆ. ಅವರ ಶಿಷ್ಯನೇ ಹೇಳಿದ್ದಾರೆ, ಅವರು ಐದು ನೂರು ರೂಪಾಯಿ ಕೊಟ್ಟಿದಾರೆ ಎಂಬುದಾಗಿ.
ನಾವೂ ಒಂದು ವೋಟಿಗೆ 500 ರೂ. ಕೊಡಬೇಕು ಎಂದಿರುವುದು ಆಡಿಯೋದಲ್ಲಿದೆ. ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಚಿವ ಬಿ ಶಿವರಾಂ ಅವರ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವುದು ಆಡಿಯೋದಲ್ಲಿದೆ. ತೀರ್ಮಾನ ಆಗಿರುವುದು ಐದು ನೂರು ರುಪಾಯಿ ಹಂಚಬೇಕು ಎಂದು. ಅಷ್ಟು ಹಂಚದಿದ್ದರೆ ಚೆನ್ನಾಗಿರಲ್ಲ ಎಂದು ಮಾತನಾಡಿರುವುದು ಆಡಿಯೋದಲ್ಲಿದೆ ಎನ್ನಲಾಗಿದೆ.
ಪೆನ್ ಡ್ರೈವ್ ಪ್ರಕರಣ ಹಾಗೂ ಅಶ್ಲೀಲ ವೀಡಿಯೋ ಬಗ್ಗೆಯೂ ಮಾತನಾಡಲಾಗಿದೆ. ಇಂತಹ ಸಮಯ ಸದುಪಯೋಗ ಮಾಡಿಕೊಳ್ಳಬೇಕು. ವೀಡಿಯೋ ಲೀಕ್ ಆದ ನಂತರ ಕುಮಾರಸ್ವಾಮಿ ಅವರೇ ಪ್ರಚಾರಕ್ಕೆ ಬರಲಿಲ್ಲ. ದೇವೇಗೌಡರು ಅಂತಹ ವಯಸ್ಸಲ್ಲಿ ಬಂದು ಪ್ರಚಾರ ಮಾಡಬೇಕಾ? ಬೇರೆ ಯಾರೂ ಇರಲಿಲ್ಲವೇ? ಬಿಜೆಪಿ ನಾಯಕರು ಕೆಲಸ ಮಾಡುತ್ತಾ ಇಲ್ಲ ಎಂದಿರುವುದು ಆಡಿಯೋದಲ್ಲಿದೆ.
ಈ ಸಂಬಂಧ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಾಜ್ಯ ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಗೆದ್ದಿದ್ದೇಗೆ ಎನ್ನುವುದನ್ನು ಮಹಾನ್ ಮೇಧಾವಿ ಅರಸೀಕೆರೆ ಶಾಸಕ ಕೆ.ಎಂ ಶಿವಲಿಂಗೇಗೌಡ ಬಾಯಿ ಬಿಟ್ಟಿದ್ದಾರೆ. ಒಂದು ಕಡೆ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮ ಹಗರಣದ ಹಣ ಹಂಚಲಾಗಿತ್ತು. ಮತ್ತೊಂದು ಕಡೆ ಕನ್ನಡಿಗರ ತೆರಿಗೆ ಹಣ ಲೂಟಿ ಹೊಡೆದು ಅಕ್ರಮವಾಗಿ ಚುನಾವಣೆ ಮಾಡಲಾಗಿದೆ. ಕೂಡಲೇ ಕರ್ನಾಟದ ಮುಖ್ಯ ಚುನಾವಣಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.