ಬೆಂಗಳೂರು ನಗರದ ನಮ್ಮ ಮೆಟ್ರೋದ ವಿಸ್ತರಿತ ಮಾರ್ಗ ರೈಲು ಸಂಚಾರಕ್ಕೆ ಸಿದ್ಧವಾಗಿದೆ. 3.14-ಕಿಮೀ ಹಸಿರು ಮಾರ್ಗ ಮೆಟ್ರೋ ವಿಸ್ತರಣೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹೀಗಾಗಿ ನಗರದ ಹೃದಯ ಭಾಗಕ್ಕೆ ಪ್ರಯಾಣಿಸುವ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.
ಈ ಮಾರ್ಗ ಪೂರ್ಣಗೊಳ್ಳುವುದರಿಂದ ನೆಲಮಂಗಲ, ಮಾದನಾಯಕನಹಳ್ಳಿ, ಮಾಕಳಿ ನಾಗರಿಕರು, ನಾಗಸಂದ್ರ-ಮಾದಾವರ ಮಾರ್ಗದ ಮೂರು ನಿಲ್ದಾಣಗಳ ಸಮೀಪದ ಅಪಾರ್ಟ್ಮೆಂಟ್ಗಳ ನಿವಾಸಿಗಳು ಮತ್ತು ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರ ದಿನಚರಿಯಲ್ಲಿ ಭಾರೀ ಬದಲಾವಣೆಯಾಗುವ ನಿರೀಕ್ಷೆಯಿದೆ. ನಮ್ಮ ಮೆಟ್ರೋ ಹಸಿರು ಮಾರ್ಗದ ವಿಸ್ತರಿತ ಯೋಜನೆ ನಾಗಸಂದ್ರ-ಮಾದಾವರ ನಡುವೆ ಮೂರು ನಿಲ್ದಾಣವಿದೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳು ಹೊಸದಾಗಿ ಹಸಿರು ಮಾರ್ಗಕ್ಕೆ ಸೇರಲಿವೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಬುಧವಾರ ಈ ಹೊಸ ನಿಲ್ದಾಣಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿತು. ಒಂದು ವಾರದೊಳಗೆ ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇರುವುದರಿಂದ ನಿಲ್ದಾಣಗಳನ್ನು ಸುಸಜ್ಜಿತಗೊಳಿಸಲಾಗುತ್ತಿದೆ. ಏಷ್ಯಾದ ಅತಿದೊಡ್ಡ ಪ್ರದರ್ಶನಗಳನ್ನು ಆಯೋಜಿಸುವ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಬಲಭಾಗಕ್ಕೆ ಚಿಕ್ಕಬಿದರಕಲ್ಲು ನಿಲ್ದಾಣವಿದೆ.
ಈ ಮಾರ್ಗ ಸಂಚಾರಕ್ಕೆ ಮುಕ್ತವಾದ ಮೇಲೆ ನಮಗೆ ಮತ್ತಷ್ಟು ಅನುಕೂಲವಾಗುತ್ತದೆ. ತುಮಕೂರು ಮುಖ್ಯರಸ್ತೆಯಲ್ಲಿನ ದಟ್ಟಣೆಯಿಂದಾಗಿ ಅನೇಕರು ಇಲ್ಲಿಯ ಎಕ್ಸ್ಪೋಸ್ಗೆ ಭೇಟಿ ನೀಡುವುದಿಲ್ಲ. ಮೆಟ್ರೋ ಸಂಚಾರದಿಂದ ನಮ್ಮ ಕೇಂದ್ರಕ್ಕೆ ಜನರ ಸುಗಮ ಭೇಟಿಗೆ ಅವಕಾಶವಾಗುತ್ತದೆ. ವಾರ್ಷಿಕವಾಗಿ ಸುಮಾರು 15-20 ಲಕ್ಷ ಜನರು ಭೇಟಿ ನೀಡುತ್ತಾರೆ. ಇದು ಈಗ ಶೇ.15 ರಿಂದ ಶೇ.20 ರಷ್ಟು ಹೆಚ್ಚಾಗಬಹುದು ಎಂದು BIEC ಯ ಹಿರಿಯ ನಿರ್ದೇಶಕ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಉಬೈದ್ ಅಹ್ಮದ್ ತಿಳಿಸಿದ್ದಾರೆ.