ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅಭ್ಯರ್ಥಿಯಾಗಬೇಕೆಂದು ಒಲವು ತೋರುತ್ತಿದ್ದಾರೆ, ಆದರೆ ಪಕ್ಷದ ಕೇಂದ್ರ ನಾಯಕರೇ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಲ್ಲದ್, ಸಚಿವರಾಗಿ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದರಿಂದ ಜನರು ಭರತ್ ಪರ ಒಲವು ತೋರುತ್ತಿದ್ದಾರೆ ಎಂಬುದು ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಂದಿದೆ. ಅವರನ್ನು (ಭರತ್) ಅಭ್ಯರ್ಥಿಯನ್ನಾಗಿ ಮಾಡುವುದರಿಂದ ಪಕ್ಷಕ್ಕೆ ಸುಲಭವಾಗಿ ಗೆಲುವು ಸಿಗಲಿದೆ ಈವಿಷಯವನ್ನು ಮತ್ತು ಪಕ್ಷದ ಹೈಕಮಾಂಡ್ಗೆ ತಿಳಿಸಲಾಗುವುದು ಎಂದಿದ್ದಾರೆ.
ಶಶಿಧರ್ ಎಲಿಗಾರ್ ಮತ್ತು ಶ್ರೀಕಾಂತ್ ದುಂಡಿಗೌಡರ್ ಸೇರಿದಂತೆ ಇತರ ಮೂವರು ಸದಸ್ಯರು ಸಹ ಟಿಕೆಟ್ಗೆ ಪ್ರಬಲ ಆಕಾಂಕ್ಷಿಗಳಾಗಿದ್ದು, ಅವರ ಹೆಸರನ್ನು ಪಕ್ಷದ ಕೇಂದ್ರ ನಾಯಕತ್ವಕ್ಕೆ ಕಳುಹಿಸಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಮಾಜಿ ಸಿಎಂ ತಮ್ಮ ಮಗನಿಗೆ ಟಿಕೆಟ್ಗಾಗಿ ಲಾಬಿ ಮಾಡದಿದ್ದರೂ ರಾಜಕೀಯ ವಾತಾವರಣ ಅವರ ಪರವಾಗಿದೆ ಎಂದು ಬೆಲ್ಲದ್ ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಫೈಟ್ ವಿಚಾರವಾಗಿ ಮಾತನಾಡಿದ ಅವರು, ನಮ್ಮ ಪಕ್ಷದ ಎಲ್ಲರೂ ಸಿಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ನಮ್ಮ ಪಕ್ಷಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ. ಎನ್.ಡಿ.ಎ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಅವರ ಹೆಸರು ಘೋಷಣೆ ಮಾಡುವಂತೆ ಒತ್ತಾಯ ಮಾಡುತ್ತೇವೆ. ಇದರ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಕುಮಾರಸ್ವಾಮಿ ಅವರು ಒಲವು ತೋರಿಸುವ ಭರವಸೆಯಿದೆ. ಸಿಪಿ ಯೋಗೇಶ್ವರ್ ಅವರು ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕ್ಷೇತ್ರದ ಜನರು ಕೂಡಾ ಸಿಪಿ ಯೋಗೇಶ್ವರ್ ಪರ ಒಲವು ತೋರಿದ್ದಾರೆ. ಯೋಗೇಶ್ವರ ಅವರಿಗೆ ಟಿಕೆಟ್ ನೀಡಿದರೆ ಗೆಲವು ನಮ್ಮದೆ ಆಗುತ್ತದೆ. ಬೇರೆಯವರಿಗೆ ಟಿಕೆಟ್ ಘೋಷಣೆ ಮಾಡಿದರೆ ಸ್ವಲ್ಪ ಕಷ್ಟವಾಗುತ್ತದೆ. ಹಾಗಾಗಿ ಯೋಗೇಶ್ವರ ಅವರಿಗೆ ಟಿಕೆಟ್ ನೀಡುವುದು ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ ಎಂದರು.
ರಾಜ್ಯ ನಾಯಕರು ಒಂದೆರಡು ದಿನಗಳಲ್ಲಿ ನವದೆಹಲಿಗೆ ಭೇಟಿ ನೀಡಲಿದ್ದು, ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ಕೇಂದ್ರ ನಾಯಕರು ಬಸವರಾಜ ಬೊಮ್ಮಾಯಿ ಅವರನ್ನೂ ಆಹ್ವಾನಿಸಿದ್ದಾರೆ ಎಂದು ಬೆಲ್ಲದ್ ಹೇಳಿದರು. ಆದರೆ, ಪಕ್ಷದ ಅಧಿಕೃತ ಅಭ್ಯರ್ಥಿ ಯಾರೇ ಆದರೂ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಹೇಳಿದರು.
ಹಳೆ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆಯಲು ಮುಂದಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಅಕ್ಟೋಬರ್ 25 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಮಾಡಲು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಹೇಳಿದರು.