ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಿ ಅನ್ನೋ ಕೂಗು ಕೇಳಿ ಬರ್ತಿರೋ ಹೊತ್ತಲ್ಲೇ ಆರೋಪಿಗಳು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗರ್ಕರ್, ವಿಧಾನಸಭೆ ಚುನಾವಣೆಗೂ ಮುನ್ನ ಜಲ್ನಾದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರ್ಪಡೆಯಾಗಿದ್ದಾನೆ.
ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017 ರಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮಹಾರಾಷ್ಟ್ರದ ತನಿಖಾ ಸಂಸ್ಥೆಗಳ ಸಹಾಯದಿಂದ ಕರ್ನಾಟಕದಲ್ಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಶ್ರೀಕಾಂತ್ ಪಂಗರ್ಕರ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು.
2017 ಸೆಪ್ಟೆಂಬರ್ 5ರ ಸಂಜೆ ಸಮಯ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ ಅವರನ್ನ ಬೆಂಗಳೂರಿನ ಮನೆಯ ಮುಂದೆಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಂದೂಕುಧಾರಿಯ ಗುಂಡಿನೇಟಿಗೆ ಉಸಿರು ನಿಂತಿತ್ತು. ಈ ಘಟನೆ ಬರೀ ರಾಜ್ಯವಲ್ಲ, ಇಡೀ ದೇಶಾದ್ಯಂತ ಸದ್ದು ಮಾಡಿತ್ತು. ಇನ್ನೂ ಕೂಡ ಈ ಪ್ರಕರಣ ಇತ್ಯರ್ಥವಾಗಿಲ್ಲ. ಹೀಗಿರುವ ಹೊತ್ತಲ್ಲೇ ಕೊಲೆ ಕೇಸ್ನ ಆರೋಪಿಯೊಬ್ಬ ರಾಜಕೀಯಕ್ಕೆ ಎಂಟ್ರಿಯಾಗಿದ್ದಾನೆ.
2001 ಮತ್ತು 2006 ರ ನಡುವೆ ಅವಿಭಜಿತ ಶಿವಸೇನೆಯ ಜಲ್ನಾ ಪುರಸಭೆಯ ಕೌನ್ಸಿಲರ್ ಆಗಿದ್ದ ಶ್ರೀಕಾಂತ್ ಪಂಗರ್ಕರ್ ನನ್ನು ಆಗಸ್ಟ್ 2018 ರಲ್ಲಿ ಬಂಧಿಸಲಾಗಿತ್ತು. ಈ ವರ್ಷ ಸೆಪ್ಟೆಂಬರ್ 4 ರಂದು ಆತ ಕರ್ನಾಟಕ ಹೈಕೋರ್ಟ್ ನಿಂದ ಜಾಮೀನು ಪಡೆದುಕೊಂಡಿದ್ದಾನೆ. 2011 ರಲ್ಲಿ ಶಿವಸೇನೆಯಿಂದ ಟಿಕೆಟ್ ನಿರಾಕರಿಸಿದ ನಂತರ, ಪಂಗರ್ಕರ್ ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಗೆ ಸೇರಿದ್ದಾನೆ. ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಶಿವಸೇನೆ ಶಿಂಧೆ ಬಣದ ನಾಯಕ ಮತ್ತು ರಾಜ್ಯದ ಮಾಜಿ ಸಚಿವ ಅರ್ಜುನ್ ಖೋಟ್ಕರ್ ಅವರ ಸಮ್ಮುಖದಲ್ಲಿ ಆತ ಪಕ್ಷಕ್ಕೆ ಮರಳಿದ್ದಾನೆ. ಈ ಬೆನ್ನಲ್ಲೇ ಮಹಾರಾಷ್ಟ್ರ ರಾಜಕಾರಣಕ್ಕೆ ಪಂಗರ್ಕರ್ ರೀ ಎಂಟ್ರಿ ಕೊಟ್ಟಿದ್ದಾರೆ. ಶಿವಸೇನೆ ಶಿಂಧೆ ಬಣಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿ ಕೇಸರಿ ಪಡೆಯ ಬಿಲ್ಲನ್ನು ಹಿಡಿದಿದ್ದಾರೆ. ಅಲ್ಲದೇ ಜಲ್ನಾ ವಿಧಾನಸಭಾ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿಯೂ ನೇಮಿಸಲಾಗಿದೆ.