ಜಾಗತಿಕವಾಗಿ ಅತಿ ಹೆಚ್ಚು ಅವಧಿಪೂರ್ವ ಜನನ ಭಾರತದಲ್ಲಿ ಆಗುತ್ತಿದ್ದು, ಎಲ್ಲಾ ಹೆರಿಗೆಗಳಲ್ಲಿ ಶೇ. 12 ರಷ್ಟು ಅವಧಿಪೂರ್ವ ಶಿಶುಗಳ ಜನನಕ್ಕೆ ಕಾರಣವಾಗುತ್ತಿದೆ. ಇಂತಹ ಹಲವು ನವಜಾತ ಶಿಶುಗಳು ವಿಶೇಷವಾಗಿ ಹಿಂದುಳಿದಿರುವ ಜಿಲ್ಲೆಗಳಲ್ಲಿ ತಾಯಿಯ ಹಾಲಿನ ಕೊರತೆಯಿಂದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯನ್ನು ಪರಿಹರಿಸಲು ವಿಜಯಪುರದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ, ಜಿಲ್ಲಾ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ತಾಯಿ ಹಾಲು ಸಂಗ್ರಹಣ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಹೈದರಾಬಾದ್ನ ಸುಶೇನಾ ಹೆಲ್ತ್ ಫೌಂಡೇಶನ್ ಹಾಗೂ ಜಿಲ್ಲಾ ಆಸ್ಪತ್ರೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಡಾ ಸಂತೋಷ್ ಕರ್ಲೆಟ್ಟಿ ನೇತೃತ್ವದಲ್ಲಿ ಎದೆ ಹಾಲು ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದ್ದು, ಅಕಾಲಿಕ ಮತ್ತು ಅನಾರೋಗ್ಯದ ಶಿಶುಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪರಿಹರಿಸುವ ಗುರಿ ಹೊಂದಲಾಗಿದೆ.
ಆಸ್ಪತ್ರೆಯಲ್ಲಿ ಪ್ರತಿ ವರ್ಷ ಸುಮಾರು 10,000 ಹೆರಿಗೆಗಳನ್ನು ಮಾಡಲಾಗುತ್ತದೆ. ಸುಮಾರು 1,000 ಅವಧಿ ಪೂರ್ವ ಶಿಶುಗಳು ಸೇರಿದಂತೆ 2,000 ನವಜಾತ ಶಿಶುಗಳಿಗೆ ನವಜಾತ ತೀವ್ರ ಆರೈಕೆಯ ಅಗತ್ಯವಿರುತ್ತದೆ. ಅಂತಹ ಶಿಶುಗಳಿಗೆ ಎದೆ ಹಾಲು ಅತ್ಯುತ್ತಮ ಪೌಷ್ಟಿಕಾಂಶದ ಆಯ್ಕೆಯಾಗಿದೆ. ಇದು ಸೋಂಕಿನ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಮರಣವನ್ನು ಶೇಕಡಾ 20 ಕ್ಕಿಂತ ಕಡಿಮೆ ಮಾಡುತ್ತದೆ ಎಂದು ಡಾ ಕಾರ್ಲೆಟ್ಟಿ ಮಾಹಿತಿ ನೀಡಿದರು. ಈ ಮಧ್ಯೆ ಫಾರ್ಮುಲಾ ಅಥವಾ ಹಸುವಿನ ಹಾಲು ಅಕಾಲಿಕ ಶಿಶುಗಳಿಗೆ ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ. ಹೀಗಾಗಿ ಎದೆಹಾಲು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕ ಪ್ರದೇಶಗಳಿಗೆ ಹೆಚ್ಚಿನ ಪ್ರಯೋಜನ ಕಲ್ಪಿಸುವ ನಿಟ್ಟಿನಲ್ಲಿ ಈ ಹಾಲಿನ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಬೀದರ್ ಮತ್ತು ಕಲಬುರಗಿಯಂತಹ ಇತರ ಜಿಲ್ಲೆಗಳಿಗೆ ಹಾಲು ವಿತರಣೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಆರಂಭದಲ್ಲಿ, ತಿಂಗಳಿಗೆ 45-50 ಲೀಟರ್ ಹಾಲು ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಮೊದಲ ವರ್ಷಕ್ಕೆ ಪ್ರತಿ ತಿಂಗಳು 100 ಲೀಟರ್ ತಲುಪುವ ಗುರಿಯಿದೆ. ಅಂತಿಮವಾಗಿ ಅದನ್ನು 150 ಲೀಟರ್ಗೆ ಹೆಚ್ಚಿಸಿದೆ.
ದಾನ ಮಾಡಿದ ಎಲ್ಲಾ ಹಾಲು ಪ್ರಮುಖ ಪೋಷಕಾಂಶಗಳು ಮತ್ತು ಪ್ರತಿಕಾಯಗಳನ್ನು ಸಂರಕ್ಷಿಸಲು ಪಾಶ್ಚರೀಕರಣಕ್ಕೆ ಒಳಗಾಗುತ್ತದೆ. ಆರು ತಿಂಗಳವರೆಗೆ ಸಂರಕ್ಷಿಸಲಾಗುತ್ತದೆ. ಹಾಲನ್ನು ಮೈನಸ್ 20 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂಗ್ರಹಿಸಲಾಗುತ್ತದೆ ಆರೋಗ್ಯವಂತ ತಾಯಂದಿರು ಮಾತ್ರ ಹಾಲನ್ನು ದಾನ ಮಾಡಬಹುದು. ಕ್ಯಾನ್ಸರ್ ಅಥವಾ ಎಚ್ಐವಿಯಂತಹ ಗಂಭೀರ ಕಾಯಿಲೆ ಇರುವವರು ಅನರ್ಹರು. ಆದಾಗ್ಯೂ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಪರಿಸ್ಥಿತಿ ಹೊಂದಿರುವ ತಾಯಂದಿರಿಗೆ ದಾನ ಮಾಡಲು ಅನುಮತಿಸಲಾಗುವುದು ಎಂದು ಅವರು ತಿಳಿಸಿದರು.