ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡರು. ಅಕ್ಟೋಬರ್ 20ರ ಬೆಳಿಗ್ಗೆ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಅವರು ನಿಧನ ಹೊಂದಿದರು. ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಈಗ ಅವರು ಭಾವುಕ ಪೋಸ್ಟ್ ಮಾಡಿದ್ದಾರೆ.
ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ ಅವರು ಅಕ್ಟೋಬರ್ 20ರಂದು ನಿಧನ ಹೊಂದಿದರು. ಅವರ ಸಾವು ಸುದೀಪ್ ಅವರಿಗೆ ಸಾಕಷ್ಟು ನೋವು ತಂದಿದೆ. ಸುದೀಪ್ ಅವರು ಅಂತಿಮ ಸಂಸ್ಕಾರದ ವೇಳೆ ಕಣ್ಣೀರು ಹಾಕಿದ್ದಾರೆ. ‘ಅಮ್ಮಾ.. ಅಮ್ಮಾ’ ಎಂದು ಅತ್ತಿದ್ದಾರೆ. ಈಗ ಅವರು ತಾಯಿಗಾಗಿ ಭಾವುಕ ಪಕ್ಕ ಬರೆದಿದ್ದಾರೆ. ಆ ದಿನ ಏನಾಯಿತು ಎಂಬುದನ್ನು ಕೂಡ ಅವರು ಹೇಳಿದ್ದಾರೆ. ‘ನನ್ನ ತಾಯಿ ಸಾಕಷ್ಟು ಪ್ರೀತಿ ತೋರಿಸುತ್ತಿದ್ದರು. ಕ್ಷಮಿಸುತ್ತಿದ್ದರು, ಕಾಳಜಿವಹಿಸುತ್ತಿದ್ದರು ಮತ್ತು ನನ್ನ ಜೀವನ ಮೌಲ್ಯಯುತವಾಗಿರುವಂತೆ ನೋಡಿಕೊಂಡರು. ಅವರು ಮನುಷ್ಯ ರೂಪದಲ್ಲಿ ಇದ್ದ ದೇವರಾಗಿದ್ದರು. ಅವರು ನನಗೆ ಹಬ್ಬದ ರೀತಿ, ನಿತ್ಯವೂ ಆಚರಿಸುತ್ತಿದ್ದೆ. ಅವರು ನನ್ನ ಗುರು, ನನ್ನ ನಿಜವಾದ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ. ನನ್ನ ಕೆಟ್ಟ ಕೆಲಸವನ್ನೂ ಇಷ್ಟಪಟ್ಟರು. ಅವರು ಈಗ ಸುಂದರ ನೆನಪು ಮಾತ್ರ’ ಎಂದು ಪತ್ರ ಆರಂಭಿಸಿದ್ದಾರೆ ಸುದೀಪ್. ‘ಇದೀಗ ನಾನು ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ. ಕುನಾಯಿತು ಎಂಬುದರ ಕುರಿತು ನನಗೆ ಬರೆಯಲು ಸಾಧ್ಯವಾಗುತ್ತಿದೆ. 24 ಗಂಟೆಗಳಲ್ಲಿ ಎಲ್ಲವೂ ಬದಲಾಗಿ ಹೋಯಿತು’ ಎಂದು ಸುದೀಪ್ ಭಾವುಕರಾಗಿ ಬರೆದುಕೊಂಡಿದ್ದಾರೆ.
‘ನಾನು ಬಿಗ್ ಬಾಸ್ ವೇದಿಕೆ ಮೇಲೆ ಇದ್ದಾಗಲೇ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂಬ ಸಂದೇಶ ಬಂತು. ಈ ಅಸಹಾಯಕತೆ ನಾನು ಮೊದಲ ಬಾರಿಗೆ ಅನುಭವಿಸಿದೆ. ಇತ್ತ ನಾನು ಶನಿವಾರದ ಸಂಚಿಕೆಯಮ್ಮ ನಿರ್ವಹಿಸುತ್ತಿದ್ದೇನೆ. ಹಲವಾರು ವಿಚಾರಗಳ ಬಗ್ಗೆ ಮಾತನಾಡುತ್ತಿದ್ದೇವೆ. ಮತ್ತೊಂದೆಡೆ ನನ್ನ ತಾಯಿಯ ಬಗ್ಗೆ ಮನಸ್ಸಿನಲ್ಲಿ ಭಯ ಕಾಡುತ್ತಿತ್ತು’ ಎಂದಿದ್ದಾರೆ ಸುದೀಪ್. ‘ನಾವು ಒಪ್ಪಿಕೊಂಡ ಕೆಲಸವನ್ನು ಮಾಡಬೇಕು ಎಂದು ಅಮ್ಮನೇ ಹೇಳಿಕೊಟ್ಟಿದ್ದರು. ಅದನ್ನೇ ಮಾಡಿದೆ. ನನಗೆ ಇದನ್ನು ಕಲಿಸಿದ್ದಕ್ಕಾಗಿ ನನ್ನ ತಾಯಿಗೆ ಋಣಿಯಾಗಿದ್ದೇನೆ. ಶನಿವಾರದ ಸಂಚಿಕೆ ಚಿತ್ರೀಕರಣದ ನಂತರ ನಾನು ಆಸ್ಪತ್ರೆಗೆ ಧಾವಿಸಿದೆ. ನನ್ನ ತಾಯಿಯನ್ನು ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ನನ್ನ ತಾಯಿ ಪ್ರಜ್ಞೆ ಕಳೆದುಕೊಂಡಿದ್ದರು. ಅದನ್ನು ನೋಡಲು ನನಗೆ ಸಾಧ್ಯವಾಗಲಿಲ್ಲ. ಭಾನುವಾರ ಅವರು ಮೃತಪಟ್ಟರು. ಕೆಲವೇ ಗಂಟೆಗಳಲ್ಲಿ ಎಲ್ಲವೂ ಬದಲಾಯಿತು’ ಎಂದಿದ್ದಾರೆ ಸುದೀಪ್.