ನಟ ಸುದೀಪ್ ತಾಯಿ ಸರೋಜಾ ಅವರು ಅಕ್ಟೋಬರ್ 20ರಂದು ವಿಧಿವಶರಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸುದೀಪ್ ಅವರ ಜೆಪಿ ನಗರದ ನಿವಾಸದ ಬಳಿ ಚಿತ್ರರಂಗ, ರಾಜಕೀಯ ಗಣ್ಯರು ಮತ್ತು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಹಾಗೆಯೇ ಈ ಬಗ್ಗೆ ವರದಿ ಬಿತ್ತರಿಸಲು ಮಾಧ್ಯಮದ ಸಿಬ್ಬಂದಿಯೂ ನೆರೆದಿದ್ದರು. ತಮ್ಮ ನಿವಾಸದ ಬಳಿ ನೆರೆದಿದ್ದ ಜನರು ಜೋರಾಗಿ ಕಿರುಚುತ್ತಾ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಾ ಗಲಾಟೆ ಮಾಡಿದ್ದವರ ಬಗ್ಗೆ ಸುದೀಪ್ ಪುತ್ರಿ ಸಾನ್ವಿ ಬೇಸರ ಹೊರ ಹಾಕಿದ್ದಾರೆ. ಈ ಕುರಿತು ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಬರೆದುಕೊಂಡಿರುವ ಸಾನ್ವಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಇದು ನಮ್ಮ ಕುಟುಂಬಕ್ಕೆ ಅತ್ಯಂತ ಕಷ್ಟಕರವಾದ ದಿನವಾಗಿದೆ. ನನ್ನ ಅಜ್ಜಿಯನ್ನು ಕಳೆದುಕೊಂಡ ದುಃಖಕ್ಕಿಂತ ನಮ್ಮ ಮನೆ ಮುಂದೆ ಸೇರಿದ ಜನರ ಜೋರಾಗಿ ಚೀರುವುದು ಹೆಚ್ಚು ನೋವುಂಟು ಮಾಡಿದೆ. ನಾನು ಅಳುತ್ತಿರುವಾಗ ನನ್ನ ಸುತ್ತಲೇ ಕ್ಯಾಮೆರಾಗಳು ಸುತ್ತುವರೆದಿದ್ದವು, ಇಷ್ಟೊಂದು ಅಮಾನುಷವಾಗಿ ನಡೆದುಕೊಳ್ಳುತ್ತಾರೆ ಎಂದು ನಾನು ತಿಳಿದುಕೊಂಡಿರಲಿಲ್ಲ. ತಾಯಿಯನ್ನು ಕಳೆದುಕೊಂಡಿದ್ದ ನನ್ನ ತಂದೆ ಅಳುತ್ತಿದ್ದಾಗ ಜನರು ನಮ್ಮನ್ನು ತಳ್ಳಾಡುತ್ತಿದ್ದರು. ಕಳೆದುಕೊಂಡ ಪ್ರೀತಿ ಪಾತ್ರರನ್ನು ಗೌರವದಿಂದ ಕಳುಹಿಸಿಕೊಡುವುದು ನಮ್ಮ ಜವಾಬ್ದಾರಿ ಮತ್ತು ಅದಕ್ಕೆ ಅವರು ಅರ್ಹರಾಗಿರುತ್ತಾರೆ ಎಂದು ಸಾನ್ವಿ ಬರೆದುಕೊಂಡಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುದೀಪ್ ಅವರ ತಾಯಿ ಸರೋಜಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್ನಲ್ಲಿ ಇರಿಸಿ ಸರೋಜಾ ಅವರಿಗೆ ಚಿಕಿತ್ಸೆ ಕೊಡಿಸಲಾಗಿಸುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗ್ಗೆ ಸರೋಜಾ ವಿಧಿವಶರಾಗುತ್ತಾರೆ.
ಇತ್ತ ಸುದೀಪ್ ಸಹ ಸಾಮಾಜಿಕ ಜಾಲತಾಣದಲ್ಲಿ ತಾಯಿ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. ಪ್ರತಿದಿನ ಬೆಳಗ್ಗೆ 5.30ಕ್ಕೆ ಗುಡ್ ಮಾರ್ನಿಂಗ್ ಕಂದಾ ಎಂಬ ಮೆಸೇಜ್ ಬರುತ್ತಿತ್ತು. ಶುಕ್ರವಾರ ಅಮ್ಮನಿಂದ ಕೊನೆಯ ಬಾರಿ ನನಗೆ ಮೆಸೇಜ್ ಬಂದಿದ್ದು ಎಂಬ ವಿಷಯವನ್ನು ಸುದೀಪ್ ಶೇರ್ ಮಾಡಿಕೊಂಡಿದ್ದಾರೆ. 24 ಗಂಟೆಯಲ್ಲಿ ಅಮ್ಮನ ಆರೋಗ್ಯದಲ್ಲಿ ಏನೇನಾಯ್ತು ಎಂಬ ವಿಷಯವನ್ನು ಸುದೀಪ್ ವಿವರವಾಗಿ ಬರೆದುಕೊಂಡಿದ್ದಾರೆ.