ರಾಜ್ಯ ಕಾಂಗ್ರೆಸ್ ಪಾಲಿಗೆ ಕೋಲಾರ ಮತ್ತೆ ಮಗ್ಗಲು ಮುಳ್ಳಾಗಿದೆ. ಕೋಲಾರ ಲೋಕಸಭಾ ಟಿಕೆಟ್ ವಿಚಾರಕ್ಕೆಸಂಬಂಧಿಸಿದಂತೆ ಭುಗಿಲೆದ್ದಿರುವ ಭಿನ್ನಮತ, ಜಿಲ್ಲೆಯ ಕಾಂಗ್ರೆಸ್ ಶಾಸಕರು ರಾಜೀನಾಮೆಗೆ ಮುಂದಾಗಿದ್ದಾರೆ. ಕೋಲಾರ ಟಿಕೆಟ್ ಸಚಿವ ಕೆ ಹೆಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಿದ್ದು, ವರಿಷ್ಠರ ನಿರ್ಧಾರದ ವಿರುದ್ಧ ಕೋಲಾರ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಸಚಿವ ಕೆ.ಹೆಚ್ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ರಾಜೀನಾಮೆ ನೀಡುತ್ತೇವೆ ಎಂದು ಸಚಿವ ಎಂ ಸಿ ಸುಧಾಕರ್ ಸೇರಿ ಜಿಲ್ಲೆಯ ಆರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರು ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾಗೆ ಕ್ಷೇತ್ರದ ಭಿನ್ನಮತ ಸ್ಫೋಟ ವಿಷಯ ರವಾನೆಯಾಗಿದ್ದು, ಸದ್ಯ ಕೋಲಾರ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಿಸದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡಿದೆ.
ಕೋಲಾರ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತವನ್ನು ಶಮನ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಂಧಾನ ಸಭೆ ನಡೆಸಿದರೂ, ನಾಯಕರ ನಡುವಿನ ಭಿನ್ನಮತ ಶಮನವಾಗಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್, ಈ ಬಗ್ಗೆ ಹೈಕಮಾಂಡ್ ಮತ್ತು ಅಸಮಾಧಾನಿತ ಶಾಸಕರ ಜೊತೆ ಮಾತನಾಡಿದ್ದಾರೆ. ಕೆ ಹೆಚ್ ಮುನಿಯಪ್ಪ ಅವರು ದೇವನಹಳ್ಳಿಯ ಶಾಸಕರಾಗಿ ಸಚಿವರಾಗಿದ್ದಾರೆ. ಅವರ ಪುತ್ರಿ ರೂಪಕಲಾ ಕೆಜಿಎಫ್ ನ ಶಾಸಕಿ, ಈಗ ಅಳಿಯನಿಗೂ ಟಿಕೆಟ್ ಕೇಳುತ್ತಿರುವುದು ಇದು ಕುಟುಂಬ ರಾಜಕೀಯದ ಪರಾಕಾಷ್ಠೆ. ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿದರೆ ಜಿಲ್ಲೆಯ ಬೇರೆ ನಾಯಕರಿಗೆ ಅನ್ಯಾಯವಾಗಲಿದೆ ಅನ್ನೋದು ಕೋಲಾರ ಅಸಮಾಧಾನಿತ ನಾಯಕರ ಒಕ್ಕೊರಲ ಅಳಲು. ಈಗಾಗಲೇ ಐವರು ಶಾಸಕರು ಬಂಡಾಯವೆದ್ದು ರಾಜೀನಾಮೆ ಬೆದರಿಕೆ ಹಾಕಿದ್ದು ಅವರ ಜೊತೆ ಈಗ ಎಸ್ ಎನ್ ನಾರಾಯಣಸ್ವಾಮಿ ಕೂಡ ಧ್ವನಿಗೂಡಿಸಿದ್ದಾರೆ.