ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದರ್ಶನ ಪಡೆಯಲು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕುಟುಂಬ ಸಮೇತರಾಗಿ ದೇಗುಲಕ್ಕೆ ಆಗಮಿಸಿದ್ದಾರೆ. ದೇಗುಲಕ್ಕೆ ಆಗಮಿಸಿದ ಎಚ್ಡಿಕೆ ಕುಟುಂಬವನ್ನ ವಾದ್ಯಗೋಷ್ಟಿಯೊಂದಿಗೆ ಜಿಲ್ಲಾಡಳಿತ ಬರಮಾಡಿಕೊಂಡಿದೆ. ಎಚ್ಡಿಕೆ ಪತ್ನಿ ಅನಿತಾ, ಸೊಸೆ ರೇವತಿ ಮತ್ತು ಮೊಮ್ಮಗನ ಜೊತೆ ಬಂದು ಕುಮಾರಸ್ವಾಮಿ ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ.
ದರ್ಶನ ಪಡೆದ ಬಳಿಕ ಮಾತನಾಡಿದ ಎಚ್ಡಿಕೆ, ನಾವು ಪ್ರತಿ ವರ್ಷ ಹಾಸನಾಂಬೆಯ ದರ್ಶನ ಪಡೆಯುತ್ತೇವೆ. ಈ ಬಾರಿ ಜಿಲ್ಲಾಡಳಿತ ಭಕ್ತರಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದೆ. ಭಕ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಚಿಕ್ಕವಯಸ್ಸಿನಿಂದಲೂ ಹಾಸನಾಂಬೆಯ ಪವಾಡ ನೋಡಿದ್ದೇನೆ. ಈ ಬಾರಿ ನನ್ನ ಮಗ ಚುನಾವಣೆಗೆ ನಿಂತಿದ್ದಾನೆ. ಈ ಬಾರಿ ಅವನಿಗೆ ಗೆಲುವಾಗಲಿ ಅಂತ ಹರಸಲು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಅಂತ ಎಚ್ಡಿಕೆ ಹೇಳಿದರು.
ಉಪಚುನಾವಣೆ ಘೋಷಣೆ ಆಗಿ ನಾಮಪತ್ರ ಸಲ್ಲಿಕೆ ಆಗಿದೆ, ಚನ್ನಪಟ್ಟಣ ರಾಜ್ಯ ಅಷ್ಟೇ ಅಲ್ಲ ದೇಶದ ಗಮನ ಸೆಳೆಯುವುದನ್ನ ಕಂಡಿದ್ದೇನೆ. ಚನ್ನಪಟ್ಟಣದ ವಿಷಯದಲ್ಲಿ ವಿರೋಧಿಗಳು ಕೊಡ್ತಿರುವ ಹೇಳಿಕೆ ಗಮನಿಸಿದ್ದೇನೆ. ಅವರಿಗೆ ಜನರೇ ಉತ್ತರ ಕೊಡ್ತಾರೆ, ಜನರು ಅಭಿಮನ್ಯು ಮಾಡುವುದಿಲ್ಲ ಅರ್ಜುನನ ಪಾತ್ರ ಕೊಡ್ತಾರೆ. ಖಂಡಿತ ಏನೇ ಕುತಂತ್ರ ಮಾಡಿದರು ಕೂಡ ಜನರು ನಿಖಿಲ್ ಗೆಲ್ಲಿಸುತ್ತಾರೆ. ಸಹೋದರರು ಏನು ನಿಲ್ಲಿಸಿಕೊಂಡಿದ್ದಾರೆ, ಅವರು ಪರಸ್ಪರ ಏನು ಚರ್ಚೆ ಮಾಡಿಕೊಂಡಿದ್ದರು ಎಂದು ಗಮನಿಸಿದರೆ ಸಾಕು. ಆಗ ಜನರೇ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಇದನ್ನು ಓದಿ : ಪಿಂಚಣಿದಾರರಿಗೆ ಗುಡ್ ನ್ಯುಸ್ ಕೊಟ್ಟ ಅಂಚೆ ಇಲಾಖೆ!
ಜಿಎಸ್ಟಿ ಹಂಚಿಕೆ ವಿಚಾರದಲ್ಲಿ ಗೊಂದಲ ವಿಚಾರವಾಗಿ ಸ್ಪಷ್ಟನೆ ನೀಡಿದ ಎಚ್ಡಿಕೆ, ಇದು ನೀವೇ ಮಾಡಿದ್ದು, ಆಗ ಇದು ಅರ್ಥ ಆಗಿರಲಿಲ್ಲವೇ? ಮನಮೋಹನ್ ಸಿಂಗ್, ಚಿದಂಬರಂ ಅವರೆಲ್ಲಾ ಕೂತೆ ಮಾಡಿದ್ದು ಅಲ್ಲವಾ? ಆಗ ಈ ಸಮಸ್ಯೆ ಆಗುತ್ತೆ ಎಂದು ಗೊತ್ತಿರಲಿಲ್ಲವೇ. ಕೊಟ್ಟ ಅನುದಾನವನ್ನು ಬಳಸಿಕೊಳ್ಳದೆ ಏನೇನೊ ಹೇಳಿದರೆ ಆಗಲ್ಲ. ಬರೀ ಮಾತಾಡಿಕೊಂಡು ಕೂತರೆ ಆಗುತ್ತಾ ಸಮಸ್ಯೆ ಅರ್ಥ ಮಾಡಿಸಬೇಕಲ್ಲ. ಕೊಟ್ಟ ಕುದುರೆ ಏರದವನು ವೀರನು ಅಲ್ಲ ಶೂರನು ಅಲ್ಲ ಅಂತಾ ಹೇಳ್ತಾರೆ. ಆ ಮಾತು ನಿಮಗೆ ಅನ್ವಯ ಆಗುತ್ತೆ ಎಂದು ಎಚ್ಡಿಕೆ ಲೇವಡಿ ಮಾಡಿದರು.