ನಟ ಕಮ್ ರಾಜಕಾರಣಿ ಪ್ರಸ್ತುತ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಲು ಮಹಿಳೆಯೊಬ್ಬರು ನೂರಾರು ಕಿಲೋ ಮೀಟರ್ನಿಂದ ಸೈಕಲ್ ಮೂಲಕ ಪ್ರಯಾಣಿಸುತ್ತಿದ್ದಾರೆ.
ರಾಜೇಶ್ವರಿ ಎನ್ನುವ ಮಹಿಳೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿಯಿಂದ ಡಿಸಿಎಂ ಪವನ್ ಕಲ್ಯಾಣರನ್ನ ಭೇಟಿ ಮಾಡಲು ಸೈಕಲ್ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಗುಂಟೂರು ಜಿಲ್ಲೆಯ ಮಂಗಳಗಿರಿಯಲ್ಲಿರುವ ಜನಸೇನಾ ಪಕ್ಷದ ಮುಖ್ಯ ಕಚೇರಿಗೆ ಮಹಿಳೆ ಭೇಟಿ ನೀಡಲಿದ್ದಾರೆ. ಆದೋನಿಯಿಂದ ಮಂಗಳಗಿರಿಗೆ ಒಟ್ಟು 487 ಕಿಲೋ ಮೀಟರ್ ಇದ್ದು ಸೈಕಲ್ ಮೂಲಕವೇ ಮಹಿಳೆ ಪ್ರಯಾಣ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ರಾಜೇಶ್ವರಿ ಅವರು ರಸ್ತೆಯಲ್ಲಿ ಸೈಕಲ್ನಲ್ಲಿ ಹೋಗುತ್ತಿರುವಾಗ ದಾರಿ ಮಧ್ಯೆ ಜನಸೇನಾ ಪಕ್ಷದ ಮುಖಂಡರು ಅವರನ್ನು ಸ್ವಾಗತಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಿಡಿಯೋಯೊಂದು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಅನ್ನು ಡಿಸಿಎಂ ಪವನ್ ಕಲ್ಯಾಣ್ ಅವರು ನೋಡಿದ್ದು ಸೈಕಲ್ನಲ್ಲಿ ನಮ್ಮ ಪಕ್ಷದ ಮುಖ್ಯ ಕಚೇರಿಗೆ ಬರುವ ಮಹಿಳೆಯನ್ನು ಭವ್ಯವಾದ ಸ್ವಾಗತ ಕೋರಿ ಎಂದು ಮುಖಂಡರಿಗೆ, ಸದಸ್ಯರಿಗೆ ತಿಳಿಸಿದ್ದಾರೆ.