ಸೌದಿ ಅರೇಬಿಯಾದಲ್ಲಿ ಮಳೆ ಆಗುವುದು ಅಪರೂಪ. ಅದರಲ್ಲಿಯೂ ಮರುಭೂಮಿಯಲ್ಲಿ ಮಳೆ ಆಗುವುದು ಎಂದರೆ ಅಪರೂಪದಲ್ಲಿ ಅಪರೂಪ. ಇಂತಹ ಸೌದಿ ಅರೇಬಿಯಾದ ಅಲ್ ಜಾಫ್ ಮರುಭೂಮಿಯಲ್ಲಿ ಪ್ರಳಯ ಸದೃಶ ಮಳೆಯಾಗಿದೆ. ಜಲಪಾತಗಳೂ ಸೃಷ್ಟಿಯಾಗಿವೆ. ಅಷ್ಟೇ ಏಕೆ, ಎಲ್ಲದರ ಜೊತೆ ಹಿಮಪಾತವೂ ಆಗಿದೆ.
ಮಳೆ ಎಂದರೆ ಸಾಧಾರಣ ಮಳೆಯಲ್ಲ. ಆಲಿಕಲ್ಲು ಸಹಿತ ಸುರಿತ ಪ್ರಳಯ ಸದೃಶ ಮಳೆ. ಈ ಮಳೆಯಿಂದಾಗಿ ಮರುಭೂಮಿಯಲ್ಲಿ ಸಣ್ಣ ಸಣ್ಣ ಜಲಪಾತಗಳೂ ಸೃಷ್ಟಿಯಾಗಿವೆ. ಅರಬ್ಬೀ ಸಮುದ್ರದಲ್ಲಿ ಉದ್ಭವವಾದ ಚಂಡಮಾರುತ, ವಾಯುಭಾರತ ಕುಸಿತವೇ ಇದಕ್ಕೆಲ್ಲ ಕಾರಣ ಎನ್ನುವುದು ಹವಾಮಾನ ತಜ್ಞರ ಹೇಳಿಕೆ. ಈಗ ಚಂಡಮಾರುತದ ಗಾಳಿ ಒಮನ್ ಕಡೆ ಸಾಗುತ್ತಿದೆಯಂತೆ.
ಇದನ್ನು ಓದಿ:ರಾಯರ ಮಠದಲ್ಲಿ ಡಾಲಿ ಧನಂಜಯ!
ಇನ್ನೂ ಕೆಲವು ದಿನ ಈ ಮರುಭೂಮಿಯಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಸೌದಿ ಅರೇಬಿಯಾದ ಅಲ್-ಜಾಫ್ ಪ್ರದೇಶದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಮ ಬಿದ್ದಿದೆ. ಯಾವಾಗಲೂ ಒಣ ಭೂಮಿಯಾಗಿದ್ದ ಈ ಪ್ರದೇಶವು ಈಗ ಚಳಿಗಾಲದ ವಂಡರ್ಲ್ಯಾಂಡ್ ಆಗಿ ಬದಲಾಗಿದೆ. ಅಭೂತಪೂರ್ವ ಹಿಮ ಬೀಳುವ ಪ್ರದೇಶ, ಭಾರಿ ಮಳೆಯಿಂದಾಗಿ ಈ ಜಾಗವು ಅದ್ಭುತವಾಗಿ ಕಾಣುತ್ತಿದೆ.
ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯದಿಂದಾಗಿ ಸದಾ ಸುಡುತ್ತಿದ್ದ ಯುಎಇ ಕೂಡಾ ಈಗ ಕೂಲ್ ಕೂಲ್ ಆಗಿದೆ. ಅಲ್ಲಿನ ಜನರಿಗೆ ಇದು ತಾತ್ಕಾಲಿಕವಾಗಿ ಖುಷಿ ಕೊಟ್ಟಿದೆಯಾದರೂ, ಈ ಮಟ್ಟಿಗಿನ ಹವಾಮಾನ ಬದಲಾವಣೆ ಒಳ್ಳೆಯ ಸುದ್ದಿಯಂತೂ ಅಲ್ಲ ಎಂದು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.