ಜಿದ್ದಾಜಿದ್ದಿಗೆ ಸಾಕ್ಷಿಯಾಗಿರುವ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರ ಬಿರುಸಿನಿಂದ ನಡೆಯುತಿದ್ದು, ಸೋಮವಾರ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಬುಧವಾರ ಮತದಾನ ನಡೆಯಲಿದೆ. ಮತದಾನದ 48 ಗಂಟೆಗೂ ಮೊದಲಿನ ಸಮಯವನ್ನು ಕೇಂದ್ರ ಚುನಾವಣಾ ಆಯೋಗವು ನಿಶ್ಯಬ್ದ ಅವಧಿ ಎಂದು ಪರಿಗಣಿಸುವುದರಿಂದ ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.
ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಸಲು ಆಯಾ ಜಿಲ್ಲಾಡಳಿತ ಸಜ್ಜಾಗಿವೆ. ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ಬಿಟ್ಟು ಹೋಗಬೇಕಾಗಿದೆ. ಮಂಗಳವಾರ ಅಭ್ಯರ್ಥಿಗಳು ಮನೆ, ಮನೆ ಪ್ರಚಾರ ನಡೆಸಲಿದ್ದಾರೆ. ಸಂಡೂರಿನಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಬಂಗಾರು ಲಕ್ಷ್ಮಣ್, ಕಾಂಗ್ರೆಸ್ ಅಭ್ಯರ್ಥಿಯಾಗಿ ಅನ್ನಪೂರ್ಣ ಕಣದಲ್ಲಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್, ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಶಿಗ್ಗಾಂವಿ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಯಾಸೀರ ಅಹ್ಮದ್ ಖಾನ್ ಪಠಾಣ್ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ: ಪಿಡಿಒ ಪರೀಕ್ಷೆಗೆ ಹಾಲ್ ಟಿಕೆಟ್ ಪ್ರಕಟ! ಡೌನ್ಲೋಡ್ ಹೇಗೆ?
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಚ್.ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ಚನ್ನಪಟ್ಟಣ, ಬಸವರಾಜ ಬೊಮ್ಮಾಯಿ ರಾಜೀನಾಮೆಯಿಂದ ಶಿಗ್ಗಾಂವಿ ಮತ್ತು ಇ. ತುಕಾರಾಂ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈ ಹಿನ್ನೆ ಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.
ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರು ತೆರಳಿ ಮತ ಯಾಚಿಸಿದ್ದಾರೆ. ಅಂತೆಯೇ ಎನ್ಡಿಎ ಅಭ್ಯರ್ಥಿಗಳ ಪರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ ಸೇರಿದಂತೆ ಎನ್ಡಿಎ ಮೈತ್ರಿಕೂಟದ ನಾಯಕರು ಬಿರುಸಿನ ಪ್ರಚಾರ ನಡೆಸಿದರು.
ಇದನ್ನೂ ಓದಿ: ಹುಡುಗನಿಂದ ಹುಡುಗಿಯಾಗಿ ಬದಲಾದ ಸ್ಟಾರ್ ಕ್ರಿಕೆಟರ್ ಮಗ!
ಆಯಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕ್ಷೇತ್ರದ ಮತದಾರರಲ್ಲದವರು ಅಥವಾ ಕ್ಷೇತ್ರದ ಚುನಾವಣಾ ಗುರುತಿನ ಚೀಟಿ ಇಲ್ಲದವರಿಗೆ ವಾಸ್ತವ್ಯಕ್ಕೆ ಅವಕಾಶ ನೀಡ ಬಾರದು ಎಂದು ಹೋಟೆಲ್, ರೆಸಾರ್ಟ್, ಹೋಂ ಸ್ಟೇ ಮತ್ತು ಕಲ್ಯಾಣ ಮಂಟಪಗಳ ಮಾಲೀಕರಿಗೆ ಮಾಹಿತಿ ನೀಡಲಾಗಿದೆ. ಅಲ್ಲದೇ, ಚುನಾವಣಾ ಆಯೋಗದ ಸಿಬ್ಬಂದಿ ಸಂಜೆ ಬಳಿಕ ಎಲ್ಲೆಡೆ ತಪಾಸಣೆ ಕಾರ್ಯ ಕೈಗೊಳ್ಳಲಿದ್ದಾರೆ.