ಮುನ್ನುಡಿ ಅಂತೊಂದು ಸಿನಿಮಾ. ಪಿ.ಶೇಷಾದ್ರಿ ನಿರ್ದೇಶನದ, ತಾರ, ದತ್ತಾತ್ರೇಯ, ಛಾಯಾಸಿಂಗ್ ಅಭಿನಯದ ಚಿತ್ರ. 2000ನೇ ಇಸವಿಯಲ್ಲಿ ತೆರೆ ಕಂಡಿದ್ದ ಈ ಚಿತ್ರಕ್ಕೆ ಬೊಳುವಾರು ಮಹ್ಮದ್ ಕುಂಞ ಅವರ ಕಥೆಯೇ ಆಧಾರ. ಆ ಚಿತ್ರದಲ್ಲಿ ಅರಬ್ಬಿಯ ಶ್ರೀಮಂತ ಬಂದು, ಇಲ್ಲಿನ ಹುಡುಗಿಯನ್ನು ನಿಖಾ ಆಗಿ, ಒಂದಷ್ಟು ದಿನ ಸಂಸಾರ ಮಾಡಿ, ಹೋಗುವಾಗ ತಲಾಖ್ ಕೊಟ್ಟು ಹೋಗುವ ಕಥೆ ಇತ್ತು. ಕರಾವಳಿ ಪ್ರದೇಶದಲ್ಲಿ ನಡೆಯುತ್ತಿದ್ದ ಸತ್ಯ ಘಟನೆಗಳನ್ನಾಧರಿಸಿ ನಿರ್ಮಾಣವಾಗಿದ್ದ ಸಿನಿಮಾಗೆ ಹಲವು ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳೂ ಸಂದಿದ್ದವು. ಇಂತಾದ್ದೇ ಒಂದು ಸಂಪ್ರದಾಯ ಈಗ ಇಂಡೋನೇಷ್ಯಾದಲ್ಲಿ ಶುರುವಾಗಿದೆಯಂತೆ.
ಇದನ್ನು ಓದಿ:ಕೃಷ್ಣಂ ಪ್ರಣಯ ಸಖಿ ಫೇಮ್ ಜಸ್ ಕರಣ್ ಸಿಂಗ್ ಕಂಠದಲ್ಲಿ ಎದೆಗಿಳಿದ ‘ಅಂಶು’..!
ಇಂಡೋನೇಷ್ಯಾದಲ್ಲಿ ಹೋಗುವ ಯುವಕರು, ಮುದುಕರಿಗಾಗಿಯೇ ತಾತ್ಕಾಲಿಕ ಮದುವೆಗಳು ನಡೆಯುತ್ತಿವೆ. ಹುಡಗಿಯರೂ ಅರ್ಥಾತ್ ಬಾಡಿಗೆ ಹೆಂಡತಿಯರೂ ರೆಡಿ ಇರುತ್ತಾರೆ. ಸಂಪ್ರದಾಯಬದ್ಧವಾಗಿಯೇ ಮದುವೆ ನಡೆಯುತ್ತವೆ. ನೂತನ ವಧು ವರರು ಕೆಲವು ದಿನ ಗಂಡ ಹೆಂಡತಿಯರಂತೆಯೇ ಸಂಸಾರ ನಡೆಸುತ್ತಾರೆ. ಮೋಜು ತೀರಿದ ಮೇಲೆ ಮಧುಮಗ ದೇಶಕ್ಕೆ ವಾಪಸ್ ಹೋದರೆ, ಹೆಂಡತಿಯಾದವಳು ಗಂಡನನ್ನು ಬಿಟ್ಟು ದೂರವಾಗುತ್ತಾಳೆ. ಗಂಡ ಎನ್ನಿಸಿಕೊಂಡವನು ಎಷ್ಟು ದಿನ ಇರುತ್ತಾನೋ, ಅಷ್ಟು ದಿನದ ಮಟ್ಟಿಗೆ ಆಕೆ ಅವನಿಗೆ ಹೆಂಡತಿಯಾಗಿ ಅಂದ್ರೆ ಬಾಡಿಗೆ ಹೆಂಡತಿಯಾಗಿರುತ್ತಾಳೆ. ಒಂದು ಲೆಕ್ಕದಲ್ಲಿ ಇದನ್ನು ಅನಧಿಕೃತ ವೇಶ್ಯಾವಾಟಿಕೆ ಎಂದರೂ ತಪ್ಪೇನಿಲ್ಲ. ಇಂಥಾದ್ದೊಂದು ಟೂರಿಸಂ ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ಹೆಚ್ಚುತ್ತಿದೆಯಂತೆ.
ಸಾಮಾನ್ಯವಾಗಿ ಬಡ ಮತ್ತು ಅವಿದ್ಯಾವಂತ ಹೆಣ್ಣು ಮಕ್ಕಳೇ ಇಲ್ಲಿ ದಲ್ಲಾಳಿಗಳ ಟಾರ್ಗೆಟ್. ಬಾಡಿಗೆ ಹೆಂಡತಿಯಾಗಲು ಬಯಸುವ ಕುಟುಂಬದವರಿಗೆ ಒಳ್ಳೆಯ ಹಣ ಸಿಗುತ್ತದೆ. ಅದಕ್ಕೆಂದೇ ದಲ್ಲಾಳಿಗಳೂ ಇರುತ್ತಾರೆ. ಕೈತುಂಬಾ ದುಡ್ಡು ಕೊಟ್ಟು ಕರೆತಂದು, ಐಷಾರಾಮಿ ಬಂಗಲೆ, ಹೋಟೆಲ್ಲುಗಳಲ್ಲಿ ಮದುವೆಯನ್ನೇ ಮಾಡಿಸ್ತಾರೆ. ಮದುವೆಯಾದ ಮೇಲೆ, ಮದುವೆಯಾಗುವ ಹುಡುಗಿ, ಹೊಸ ಗಂಡನ ಜೊತೆ ಸಂಸಾರ ನಡೆಸುತ್ತಾಳೆ. ಪ್ರವಾಸ ಹೋಗಿದ್ದ ಯುವಕ ಅಥವಾ ಮುದುಕ ಪ್ರವಾಸ ಮುಗಿದ ಮೇಲೆ ಡಿವೋರ್ಸ್ ಕೊಟ್ಟು ಹೊರಟು ಬಿಡುತ್ತಾನೆ. ಅಲ್ಲಿಗೆ ಮದುವೆಯ ಟೂರಿಸಂ ಮುಕ್ತಾಯವಾಗುತ್ತದೆ. ಇಂಗ್ಲಿಷಿನಲ್ಲಿ ಇದು ಪ್ಲೆಷರ್ ಮ್ಯಾರೇಜ್ ಎಂದು ಕರೆಯಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಟೂರಿಸಂ ಹೆಚ್ಚಿದೆಯಂತೆ.
ಇದನ್ನು ಓದಿ:ಸತ್ತವನು ಬದುಕಿ ಬಂದ, ಸಾವಿನಾಚೆಯ ಲೋಕ ಕಂಡ! ಆತ ಹೇಳಿದ 117 ಭವಿಷ್ಯವಾಣಿಗಳು!
ಇಂಡೋನೇಷ್ಯಾ ಕಾನೂನು ಪ್ರಕಾರ ಗುತ್ತಿಗೆ ಮದುವೆಗಳು ನಿಷಿದ್ಧ. ಕಾನೂನು ಬಾಹಿರ. ಇಂತಹ ಮದುವೆಯಾದವರು ಸಿಕ್ಕಿಬಿದ್ದರೆ, ಕಠಿಣ ಶಿಕ್ಷೆಗಳೂ ಇವೆ. ಆದರೆ, ವಂಚನೆಗೊಳಗಾದವರು ದೂರು ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳುತ್ತದೆ. ಕಾನೂನನ್ನೂ ಮೀರಿ ಇಂತಹ ನಿಷಿದ್ಧ ಪ್ರವಾಸೋದ್ಯಮವೊಂದು ಇಂಡೋನೇಷ್ಯಾದಲ್ಲಿ ಸಕ್ರಿಯವಾಗಿದೆ. ಇಂತಹ ಮದುವೆಗಳನ್ನು ಮಾಡಿಸುವುದಕ್ಕೆಂದೇ ದಲ್ಲಾಳಿಗಳಿದ್ದಾರೆ. ಏಜೆನ್ಸಿಗಳೂ ಇವೆ. ಇಂತಹ ದಲ್ಲಾಳಿ, ಏಜೆನ್ಸಿಗಳನ್ನು ಟೂರಿಸಂ ಬಿಸಿನೆಸ್ಸಿಗಾಗಿ ಸಲಹುತ್ತಿರುವ ಹೋಟೆಲ್, ರೆಸಾರ್ಟುಗಳೂ ಇವೆ. ಸಮಸ್ಯೆ ಏನಾದರೂ ಬಂದರೆ ಅವರೇ ನಿಭಾಯಿಸ್ತಾರಂತೆ. ಒಟ್ಟಿನಲ್ಲಿ ಇಂಡೋನೇಷ್ಯಾದಲ್ಲೀಗ ಬಾಡಿಗೆ ಹೆಂಡತಿಯರಿಗೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರ ಮುಂದಾಗಿದ್ದರೂ, ಪರಿಣಾಮ ಬೀರುತ್ತಿಲ್ಲ.