ಬೇಲೆಕೇರಿ ಬಂದರು ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಸತೀಶ್ ಸೈಲ್ ಹಾಗೂ ಇತರ ಆರೋಪಿಗಳಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಅಮಾನತ್ತಿನಲ್ಲಿಟ್ಟಿದೆ. ಆರೋಪಿಗಳಿಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತ್ತಿನಲ್ಲಿಡಲು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ ಅವರಿದ್ದ ಪೀಠ ಆದೇಶಿಸಿದ್ದು, ಜನ ಪ್ರತಿನಿಧಿ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
ಬೇಲೆಕೇರಿ ಬಂದರಿನಲ್ಲಿದ್ದ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು ಆರು ಪ್ರಕರಣಗಳಲ್ಲಿ ಶಿಕ್ಷೆ ಘೋಷಣೆ ಮಾಡಿತ್ತು. ಅಲ್ಲದೆ, 44 ಕೋಟಿಗೂ ಅಧಿಕ ದಂಡ ವಿಧಿಸಿತ್ತು. ಒಳಸಂಚು ಆರೋಪದಲ್ಲಿ 5 ವರ್ಷ, ವಂಚನೆ ಪ್ರಕರಣದಲ್ಲಿ 7 ವರ್ಷ, ಕಳ್ಳತನ ಪ್ರಕರಣದಲ್ಲಿ 3 ವರ್ಷ ಶಿಕ್ಷೆ ವಿಧಿಸಿತ್ತು. ಅಲ್ಲದೆ, 4, 5 ಹಾಗೂ 6 ನೇ ಪ್ರಕರಣದಲ್ಲಿ ಕೂಡಾ ಶಿಕ್ಷೆಯನ್ನು ವಿಧಿಸಿತ್ತು. ಅತಿ ಹೆಚ್ಚು 7 ವರ್ಷ ಶಿಕ್ಷೆ ಅಂತಿಮವಾಗಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಈ ತೀರ್ಪು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು.
ಅಪರಾಧಿಗಳ ಪರ ಹಿರಿಯ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು. ವಿಚಾರಣೆಯ ಹಂತದಲ್ಲಿ, ದೋಷಿಗಳಿಗೆ ವಿಧಿಸಿರುವ ದುಬಾರಿ ದಂಡ ಮೊತ್ತವನ್ನು ಪಾವತಿಸುವ ಕುರಿತಾಗಿ ಪೀಠ ವಾದ ಆಲಿಸಬೇಕು ಎಂದು ವಾದ ಮಾಡಿದ್ದರು. ಸತೀಶ್ ಸೈಲ್ ಒಟ್ಟು 15 ಕೋಟಿ ದಂಡವನ್ನು ಪಾವತಿ ಮಾಡಬೇಕಾಗುತ್ತದೆ ಇಷ್ಟೊಂದು ದುಬಾರಿ ಮೊತ್ತವನ್ನು ಪಾವತಿಸಲು ಹೇಗೆ ಸಾಧ್ಯ? ಎಂದು ವಾದಿಸಿದ್ದರು. ಆದರೆ ಸಿಬಿಐ ಪರವಾಗಿ ವಾದ ಮಾಡಿದ್ದ ಎಸ್ಪಿಸಿ ಪ್ರಸನ್ನ ಕುಮಾರ್, ಈ ಪ್ರಕರಣದಲ್ಲಿ ಒಟ್ಟಾರೆ ನೋಡಿದರೆ 42 ವರ್ಷ ಶಿಕ್ಷೆಯಾಗಬೇಕಿದೆ. ಈ ನೆಲೆಯಲ್ಲಿ ದಂಡ ಪಾವತಿಯಿಂದ ವಿನಾಯಿತಿ ನೀಡಬಾರದು ಎಂದು ವಾದಿಸಿದ್ದರು. ಅಂತಿಮವಾಗಿ ಯಾರಿಗೆ ಎಷ್ಟು ದಂಡ ಎಂದು ಎಂದು ಹೇಳಿಲ್ಲ ಎಂಬ ಅಂಶವನ್ನು ಪ್ರತಿಪಾದಿಸಿದ್ದಕ್ಕೆ ಗೆಲುವು ಸಿಕ್ಕಿದೆ. ಸತೀಶ್ ಸೈಲ್ ಸೇರಿ ಎಲ್ಲ ಆರೋಪಿಗಳಿಗೆ ಜಾಮೀನು ನೀಡಿದೆ. ತೀರ್ಪನ್ನು ಆದರೆ ವಿಧಿಸಲಾಗಿರುವ ದಂಡದ ಶೇ.25ರಷ್ಟನ್ನು ಒಂದೂವರೆ ತಿಂಗಳ ಒಳಗೆ ಠೇವಣಿಯಾಗಿ ಇಡುವಂತೆ ಆದೇಶಿಸಿದೆ. ನಾಳೆ (ನವೆಂಬರ್ 14) ಆರೋಪಿಗಳು ಜೈಲಿನಿಂದ ಹೊರಬರುವ ನಿರೀಕ್ಷೆ ಇದೆ.
ಪ್ರಕರಣದ ಹಿನ್ನೆಲೆ :
ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಭಾರಿ ಪ್ರಮಾಣದ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗುತ್ತಿತ್ತು. 2010ರ ಮಾ.20 ರಂದು ಅರಣ್ಯ ಇಲಾಖೆ 350 ಕೋಟಿ ರೂ. ಮೌಲ್ಯದ ಬರೋಬ್ಬರಿ 8.5 ಲಕ್ಷ ಮೆಟ್ರಿಕ್ ಟನ್ ಅದಿರು ಮುಟ್ಟುಗೋಲು ಹಾಕಿಕೊಂಡಿತ್ತು. ಈ ಅದಿರನ್ನು ಕಾಯ್ದುಕೊಳ್ಳುವಂತೆ ಬೇಲೆಕೇರು ಬಂದರು ನಿರ್ವಹಿಸುತ್ತಿದ್ದ ಬಂದರು ಇಲಾಖೆಗೆ ಅರಣ್ಯ ಇಲಾಖೆಯು ಸೂಚನೆ ನೀಡಿತ್ತು. ಕೆಲವು ತಿಂಗಳ ಬಳಿಕ ಅರಣ್ಯ ಇಲಾಖೆ ತಂಡ ಮರು ಪರಿಶೀಲನೆ ಮಾಡಿದಾಗ ಬಂದರಿನಲ್ಲಿ ಕೇವಲ 2 ಲಕ್ಷ ಮೆಟ್ರಿಕ್ ಟನ್ ಅದಿರು ಮಾತ್ರ ಇತ್ತು. ಉಳಿದ ಟನ್ ನಾಪತ್ತೆಯಾಗಿತ್ತು. 250 ಕೋಟಿ ರೂ. ಅದಿರು ನಾಪತ್ತೆ ಬಗ್ಗೆ ಬಂದರು ಅಧಿಕಾರಿ, ಅದಿರು ಸಾಗಣೆ ಕಂಪನಿಗಳ ವಿರುದ್ಧ ಅರಣ್ಯ ಇಲಾಖೆಯು ದೂರು ನೀಡಿತ್ತು. ಅಕ್ರಮವೆಸಗಿದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿ ಒತ್ತಾಯ ಮಾಡಿದ್ದರು. 2010ರ ಜೂ.23ರಂದು ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. 2011ರಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿತ್ತು. ಸುಪ್ರೀಂಕೋರ್ಟ್ 2009 ರಿಂದ ಮೇ 2010ರ ನಡುವೆ ರಾಜ್ಯದಲ್ಲಿನ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಅದಿರು ಸಾಗಣೆ ಕುರಿತು ತನಿಖೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಸಿಬಿಐ 2013ರ ಸೆ.13 ರಂದು ಕೇಸ್ ದಾಖಲಿಸಿ ತನಿಖೆ ನಡೆಸಿತ್ತು.
ಇದನ್ನು ಓದಿ: ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸಿದೆ: ನಿಖಿಲ್ ಕುಮಾರಸ್ವಾಮಿ
ಸತೀಶ್ ಸೈಲ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಕಂಡುಬಂದಿತ್ತು. ಬೇಲೆಕೇರಿ ಬಂದರಿನ ಮೂಲಕ ಸುಮಾರು 88.06 ಲಕ್ಷ ಮೆಟ್ರಿಕ್ ಟನ್ ಅದಿರನ್ನು 73 ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ರವಾನೆ ಮಾಡಲಾಗಿತ್ತು ಎಂದು ಕೇಂದ್ರೀಯ ಸಮಿತಿ ಪ್ರಾಧಿಕಾರ (ಸಿಇಸಿ) ವರದಿ ನೀಡಿತ್ತು. ಆರೋಪಿಗಳ ಜತೆ ಸಂಚು ರೂಪಿಸಿ ಸತೀಶ್ ಸೈಲ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿದ್ದರು. ಹೀಗೆ ರಫ್ತಾಗಿರುವ ಅದಿರಿನಲ್ಲಿ 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ. ಕಂಪನಿಯೇ ರಫ್ತು ಮಾಡಿತ್ತು ಎಂದು ಸಿಬಿಐ ಆರೋಪಿಸಿತ್ತು. ಇದನ್ನು ಪರಿಗಣಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.