ರಾಜ್ಯದಲ್ಲೀಗ 3 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದೆ. ಫಲಿತಾಂಶ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ಫಲಿತಾಂಶ ತಿಳಿಯುವುದಕ್ಕೆ ನವೆಂಬರ್ 23ರ ವರೆಗೆ ಕಾಯಬೇಕು. ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭೆ ಉಪ ಚುನಾವಣೆಯಲ್ಲಿನ ವಿಶೇಷತೆ ಏನೆಂದರೆ, ಮೂರೂ ಪಕ್ಷಗಳು ತಲಾ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಕ್ಷೇತ್ರಗಳು. ಬಿಜೆಪಿ ಶಿಗ್ಗಾಂವಿಯಲ್ಲಿ (ಬಸವರಾಜ ಬೊಮ್ಮಾಯಿ), ಕಾಂಗ್ರೆಸ್ ಸಂಡೂರಿನಲ್ಲಿ (ತುಕಾರಾಂ) ಹಾಗೂ ಜೆಡಿಎಸ್ ಚನ್ನಪಟ್ಟಣದಲ್ಲಿ (ಹೆಚ್ ಡಿ ಕುಮಾರಸ್ವಾಮಿ) ಗೆದ್ದಿದ್ದರು. ವಿಧಾನಸಭೆ ಚುನಾವಣೆ ನಡೆದಾಗ ಶತ್ರುಗಳಂತೆ ಬಡಿದಾಡಿದ್ದ ಜೆಡಿಎಸ್ ಮತ್ತು ಬಿಜೆಪಿ, ಈಗ ಮಿತ್ರ ಪಕ್ಷಗಳಾಗಿವೆ. ಇನ್ನು ಕಾಂಗ್ರೆಸ್ಸಿನ ನಾಯಕತ್ವದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಈ ಉಪಚುನಾವಣೆ ಏನಾದರೆ ಏನು ಫಲಿತಾಂಶ ಕೊಡಬಹುದು ಎಂಬ ನಿರೀಕ್ಷೆಯಂತೂ ಇದೆ.
ನಿರೀಕ್ಷೆಗಳ ಪ್ರಕಾರ 3-0, 2-0 ಹಾಗೂ 2-1 ರಿಸಲ್ಟ್ ನಿರೀಕ್ಷೆ ಇದೆ. ಆದರೆ ಯಾರದ್ದು ದೊಡ್ಡ ಪಕ್ಷವಾಗಲಿದೆ ಎಂಬುದೇ ಕುತೂಹಲ. ಏಕೆಂದರೆ ಕಾಂಗ್ರೆಸ್ ಮುನ್ನಡೆ ಪಡೆದರೆ ಆಗುವ ಪರಿಣಾಮವೇ ಬೇರೆ. ಬಿಜೆಪಿ-ಜೆಡಿಎಸ್ ಒಕ್ಕೂಟ ಮೇಲುಗೈ ಸಾಧಿಸಿದರೆ ಆಗುವ ಪರಿಣಾಮವೇ ಬೇರೆ.
ಕಾಂಗ್ರೆಸ್ ಮೇಲುಗೈ ಸಾಧಿಸಿದರೆ..
ಕಾಂಗ್ರೆಸ್ ಏನಾದರೂ ಮೂರಕ್ಕೆ ಮೂರೂ ಗೆದ್ದರೆ ಅಥವಾ 2 ಕ್ಷೇತ್ರ ಗೆದ್ದರೆ ಆಗ ಪಕ್ಷದೊಳಗೆ ಹಾಗೂ ರಾಜ್ಯದೊಳಗೆ ಸಿದ್ದರಾಮಯ್ಯ ನಾಯಕತ್ವ ಇನ್ನಷ್ಟು ಗಟ್ಟಿಯಾಗಲಿದೆ. ಸಿಎಂ ಬದಲಾವಣೆ ಚರ್ಚೆ ಸೈಡ್ ಲೈನಿಗೆ ಶಿಫ್ಟ್ ಆಗಲಿದೆ. ಆ ಮೂಲಕ ಕಾಂಗ್ರೆಸ್ ಜನಪ್ರಿಯತೆ ಕಿಂಚಿತ್ತೂ ಕುಂದಿಲ್ಲ ಎಂಬ ಸಂದೇಶ ರವಾನೆ. ಇದರ ಜೊತೆಗೆ ಮುಡಾ ಹಗರಣವಾಗಲೀ, ವಕ್ಫ್ ವಿವಾದವಾಗಲೀ ಯಾವುದೇ ರೀತಿಯ ಪ್ರಭಾವ ಬೀರಿಲ್ಲ ಎಂಬ ಸಂದೇಶ ರವಾನೆಯಾಗಲಿದೆ. ಆ ಹೋರಾಟಕ್ಕೂ ಹಿನ್ನಡೆಯಾಗಲಿದೆ. ಎಲ್ಲದರ ಜೊತೆಗೆ ಗ್ಯಾರಂಟಿಯೇ ಗಟ್ಟಿ ಆಯುಧ ಎಂದು ಕಾಂಗ್ರೆಸ್ಗೆ ಸಂದೇಶ ಕೊಡಲಿದೆ.
ಇನ್ನೊಂದು ವಿಷಯ ಎಂದರೆ ಡಿಕೆ ಶಿವಕುಮಾರ್ ಒಕ್ಕಲಿಗ ನಾಯಕ ಎಂಬ ವಾದಕ್ಕೆ ಬಲ ಬರಲಿದೆ. ಗೌಡರ ಕೋಟೆಗೆ ನುಗ್ಗಿ ಗೆದ್ದ ಬಂಡೆ ಹೆಡ್ ಲೈನ್ಸ್ ರಾರಾಜಿಸಲಿವೆ. ಇದೆಲ್ಲದರ ಜೊತೆಗೆ ಮುಂದಿನ ಬಾರಿ ಸಿಎಂ ಪಟ್ಟ ನನ್ನದೇ ಎಂಬ ಡಿಕೆಶಿ ವಾದಕ್ಕೆ ಶಕ್ತಿ ಬರಲಿದೆ. ಪೈಪೋಟಿ ಇರುವುದಿಲ್ಲ ಎಂದ ಹೇಳಲಾಗದೇ ಇದ್ದರೂ, ಕಡಿಮೆಯಂತೂ ಆಗಲಿದೆ.
ಕಾಂಗ್ರೆಸ್ ಹಿನ್ನಡೆ ಅನುಭವಿಸಿದರೆ..
ಆದರೆ.. ಅಕಸ್ಮಾತ್ ಮೂರು ಬೈಎಲೆಕ್ಷನ್ನುಗಳಲ್ಲಿ ಕಾಂಗ್ರೆಸ್ ಕೇವಲ ಒಂದು ಕ್ಷೇತ್ರ ಗೆದ್ದರೆ, ಅಥವಾ ಮೂರಕ್ಕೆ ಮೂರೂ ಸೋತರೆ ಆಗ ಅನುಮಾನವೇ ಇಲ್ಲದಂತೆ ಸಿದ್ದರಾಮಯ್ಯ ನಾಯಕತ್ವ ಬದಲಾವಣೆ ಕೂಗು ಜೋರಾಗಬಹುದು. ಇದುವರೆಗೆ ಒಳಗೊಳಗೆ ನಡೆಯುತ್ತಿದ್ದ ಸಿಎಂ ಬದಲಾವಣೆ ಹೋರಾಟ ಬಹಿರಂಗಕ್ಕೆ ಬಂದರೂ ಬರಬಹುದು. ಮುಡಾ ಹಗರಣ, ವಕ್ಫ್ ವಿವಾದದಿಂದ ಸೋಲು ಎಂಬ ವಾದ ಮುನ್ನೆಲೆಗೆ ಬಂದರೆ, ಕಾಂಗ್ರೆಸ್ ಯಾವ ಹೆಜ್ಜೆ ಇಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಆದರೆ ಗ್ಯಾರಂಟಿಗಳು ಜನಮನ ಗೆಲ್ಲುವಲ್ಲಿ ವಿಫಲ ಎಂಬ ಸಂದೇಶವಂತೂ ರವಾನೆಯಾಗಲಿವೆ. ದೇಶಾದ್ಯಂತ ಕರ್ನಾಟಕ ಮಾಡೆಲ್ ಎಂಬ ಕಾಂಗ್ರೆಸ್ ಘೋಷಣೆ, ಬನ್ನಿ, ಕರ್ನಾಟಕ ನೋಡಿ ತಿಳಿದುಕೊಳ್ಳಿ ಎಂಬ ಪ್ರಚಾರಕ್ಕೂ ಬ್ರೇಕ್ ಬೀಳಲಿದೆ. ಇದರೆಲ್ಲದರ ಜೊತೆ ಉಸ್ತುವಾರಿ ಹೊತ್ತಿದ್ದ ಸಚಿವರ ತಲೆದಂಡ ಗ್ಯಾರಂಟಿ ಆಗಬಹುದು. ಏಕೆಂದರೆ ಸಿದ್ದರಾಮಯ್ಯ ಸಂಪುಟದಲ್ಲಿರುವ ಎಲ್ಲ ಸಚಿವರಿಗೂ ಒಂದೊಂದು ಕೆಲಸ ನೀಡಲಾಗಿದ್ದು, ಯಾರು ಯಾವ ಕೆಲಸದಲ್ಲಿ ವಿಫಲರಾದರು ಎಂಬುದು ಗೊತ್ತಾಗುತ್ತಿದ್ದಂತೆಯೇ ತಲೆದಂಡವಾದರೂ ಆಶ್ಚರ್ಯವಿಲ್ಲ.
ಇನ್ನು ಒಕ್ಕಲಿಗರ ಕೋಟೆಗೆ ದೇವೇಗೌಡರೇ ಚಕ್ರವರ್ತಿ. ಕುಮಾರಸ್ವಾಮಿಯೇ ಮಹಾರಾಜ ಎಂಬ ವಾದಕ್ಕೆ ಶಕ್ತಿ ಬರಲಿದ್ದು, ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಹೊಸ ನಾಯಕ ಎಂಬ ಹೊಸ ನಂಬಿಕೆ ಛಿದ್ರವಾಗಬಹುದು.
ಮೈತ್ರಿ ಕೂಟ ಮೇಲುಗೈ ಸಾಧಿಸಿದರೆ..
ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಲಾ ಒಂದು ಕ್ಷೇತ್ರದಲ್ಲಿ ಇದ್ದವು. ಆ ಎರಡು ಕ್ಷೇತ್ರಗಳನ್ನೂ ಗೆದ್ದರೆ, ಮಿತ್ರಕೂಟ ಯಥಾಸ್ಥಿತಿ ಕಾಯ್ದುಕೊಂಡಂತೆ. ಆ ಮಟ್ಟಿಗೆ ಆದರೂ ಕೂಡಾ ಬಿಜೆಪಿ ಗೆದ್ದಂತೆ. ಆದರೆ ಸಂಡೂರನ್ನೂ ಗೆದ್ದರೆ ಆಗುವ ಪರಿಣಾಮವೇ ಬೇರೆ.
ಬಿಜೆಪಿಯಲ್ಲಿ ವಿಜಯೇಂದ್ರ ಕೈ ಮೇಲಾಗಬಹುದು. ವಿಜಯೇಂದ್ರ ವಿರೋಧಿ ಬಣದಲ್ಲಿರುವ ಯತ್ನಾಳ್, ಜಾರಕಿಹೊಳಿ ಪಡೆಯ ಶಕ್ತಿ ದುರ್ಬಲವಾಗಬಹುದು. ಮುಡಾ ವಿರೋಧಿಸಿ ಪಾದಯಾತ್ರೆ, ವಕ್ಫ್ ವಿರೋಧಿ ಹೋರಾಟ ಶಕ್ತಿ ನೀಡಿದೆ ಎಂಬ ಸಂದೇಶ ರವಾನೆಯಾಗಬಹುದು. ಇನ್ನು ಒಕ್ಕಲಿಗರ ಕೋಟೆಯಲ್ಲಿ ಕುಮಾರಸ್ವಾಮಿ ಶಕ್ತಿ ಕುಂದಿಲ್ಲ ಎಂಬ ಸಂದೇಶವೂ ರವಾನೆಯಾಗಲಿದೆ.
ಮೈತ್ರಿಕೂಟಕ್ಕೆ ಹಿನ್ನಡೆಯಾದರೆ..
ಅನುಮಾನವೇ ಇಲ್ಲದಂತೆ ವಿಜಯೇಂದ್ರ ವಿರೋಧಿ ಬಣಕ್ಕೆ ದೊಡ್ಡ ಶಕ್ತಿ ಸಿಗಬಹುದು. ಪಕ್ಷದೊಳಗೆ ಒಗ್ಗಟ್ಟು ಇಲ್ಲದಿದ್ದರೆ ಗೆಲುವು ಸಾಧ್ಯವಿಲ್ಲ ಎಂಬ ಸಂದೇಶವೂ ರವಾನೆಯಾಗಲಿದೆ. ಇನ್ನು ಗ್ಯಾರಂಟಿಗಳ ವಿರುದ್ಧ ಹಗರಣ, ಧರ್ಮದ ಕಾರ್ಡ್ ಕೆಲಸ ಮಾಡಲ್ಲ ಎಂಬ ಮೆಸೇಜ್ ಕೂಡಾ ಹೋಗಲಿದೆ. ಒಕ್ಕಲಿಗರ ಕೋಟೆಯಲ್ಲಿ ಹೊಸ ನಾಯಕತ್ವ ಹುಟ್ಟಿದೆ. ನಾಯಕತ್ವ ಬದಲಾಗುತ್ತಿದೆ ಎಂಬ ಸಂದೇಶವೂ ಹೋಗಲಿದೆ.
ಮುಸ್ಲಿಮ್ ಮತದಾರರೇ ಟರ್ನಿಂಗ್ ಪಾಯಿಂಟ್ : ಯಾರೇ ಗೆಲ್ಲಲಿ, ಯಾರೇ ಸೋಲಲಿ, ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ಮುಸ್ಲಿಮರೇ ನಿರ್ಣಾಯಕ. ಮುಸ್ಲಿಮರ ಮತವನ್ನು ಹಿಡಿತದಲ್ಲಿಟ್ಟುಕೊಂಡಿರುವ ಜಮೀರ್ ಅಹ್ಮದ್ ಸ್ಥಾನವಂತೂ ಕಿಂಚಿತ್ತೂ ಅಲುಗಾಡುವುದಿಲ್ಲ ಎನ್ನುವುದು ತಜ್ಞರ ವಿಶ್ಲೇಷಣೆ.