ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಲಿದ್ದು, ಡಿ.25 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಅಯ್ಯಪ್ಪ ಸ್ವಾಮಿ ದರ್ಶನ ಸೇರಿದಂತೆ ಮಂಡಲ ಪೂಜೆ ಪ್ರಾರಂಭಗೊಳ್ಳಲಿದೆ. ದರ್ಶನ ಅವಧಿಯನ್ನು 18 ಗಂಟೆಗೆ ವಿಸ್ತರಿಸಲಾಗಿದ್ದು, ಪ್ರತಿ ನಿತ್ಯ 70,000 ಜನರಿಗೆ ದರ್ಶನ ಅವಕಾಶ ನೀಡುವಂತೆ ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಜೊತೆಗೆ ಜನಸಂದಣಿ ಹೆಚ್ಚಾದಲ್ಲಿ ಸಮಯವನ್ನು ಅರ್ಧಗಂಟೆ ವಿಸ್ತರಿಸುವಂತೆ ಚಿಂತಿಸಿದೆ.
ಸುಮಾರು 60,000 ಜನರು ವರ್ಚುವಲ್ ಸರತಿ ವ್ಯವಸ್ಥೆಯ ಮೂಲಕ ದರ್ಶನವನ್ನು ಪಡೆಯುತ್ತಾರೆ. ಇನ್ನೂ 10,000 ಜನರು ಸ್ಥಳದಲ್ಲೇ ಬುಕ್ಕಿಂಗ್ ಮಾಡಲು ಅನುಮತಿಸಲಾಗಿದೆ. ಇನ್ನೂ ಈ ಕುರಿತು ಶಬರಿಮಲೆ ದೇವಸ್ಥಾನ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ಮಾತನಾಡಿ, ತೀರ್ಥೋದ್ಭವದ ಆರಂಭದಿಂದ ಪ್ರತಿದಿನ ಬೆಳಗ್ಗೆ 3 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ರಾತ್ರಿ 11 ರವರೆಗೆ ದರ್ಶನಕ್ಕೆ ನೀಡಲಾಗುವುದು. ಇದರಿಂದಾಗಿ ಭಕ್ತರ ನುಕುನುಗ್ಗಲನ್ನು ಕಡಿಮೆಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ!
ಸ್ಥಳದಲ್ಲಿಯೇ ಬುಕ್ಕಿಂಗ್ ಮಾಡಲು ಪಂಪಾ, ಎರುಮೇಲಿ ಮತ್ತು ವಂಡಿಪೆರಿಯಾರ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಲವಾರು ಕೌಂಟರ್ಗಳನ್ನು ಸ್ಥಾಪಿಸಲಾಗಿದೆ. ಸ್ಪಾಟ್ ಬುಕಿಂಗ್ ಆಯ್ಕೆ ಮಾಡಿಕೊಳ್ಳುವ ಭಕ್ತರು ತಮ್ಮ ಗುರುತಿನ ಆಧಾರ್ ಕಾರ್ಡ್ನ್ನು ತೋರಿಸುವುದು ಕಡ್ಡಾಯವಾಗಿದೆ.
ಭಕ್ತರಿಗೆ ಹೆಚ್ಚಿನ ಅನುಕೂಲತೆಗಾಗಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಶಬರಿಮಲೆಗೆ ಪ್ರಯಾಣಿಸುವವರಿಗೆ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ನೀಡುತ್ತದೆ. ವರ್ಚುವಲ್ ಸರತಿ ವ್ಯವಸ್ಥೆಯ ಮೂಲಕ ದರ್ಶನವನ್ನು ಬುಕ್ ಮಾಡುವಾಗ ಭಕ್ತರು ಕೆಎಸ್ಆರ್ಟಿಸಿ ಟಿಕೆಟ್ಗಳನ್ನು ಖರೀದಿಸಲು ವಿಶೇಷ ಅವಕಾಶವನ್ನು ನೀಡಿದೆ. ಇದಲ್ಲದೆ, ಕನಿಷ್ಠ 40 ಜನರ ಗುಂಪು ಹೊಂದಿರುವವರು 10 ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಆಯ್ಕೆಯನ್ನು ಕೂಡ ನೀಡಲಾಗಿದೆ.
ಕೇರಳದ ಸಾರಿಗೆ ಸಚಿವ ಕೆಬಿ ಗಣೇಶ್ ಕುಮಾರ್ ಮಾತನಾಡಿ, 2024ರ ಮಂಡಲ ಮಕರವಿಳಕ್ಕು ಯಾತ್ರೆಯ ಮೊದಲ ಹಂತಕ್ಕೆ 383 ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಹೆಚ್ಚುವರಿಯಾಗಿ 550 ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಕೆಲವು ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ