ಭೈರತಿ ರಣಗಲ್.. ಕರುನಾಡ ಚಕ್ರವರ್ತಿ ಡಾ. ಶಿವರಾಜ್ಕುಮಾರ್ ನಟನೆಯ 129ನೇ ಸಿನಿಮಾ. ನಿನ್ನೆಯಷ್ಟೇ ಈ ಚಿತ್ರ ವಿಶ್ವದಾದ್ಯಂತ ಬರೋಬ್ಬರಿ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ತೆರೆಗಪ್ಪಳಿಸಿದೆ.
ಏಳು ವರ್ಷಗಳ ಹಿಂದೆ ಬಂದಂತಹ ಮಫ್ತಿ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಮಫ್ತಿ ಸಿನಿಮಾದ ನಿರ್ದೇಶಕ ನರ್ತನ್ ಅವರೇ ಆಕ್ಷನ್ ಕಟ್ ಹೇಳಿರೋ ಭೈರತಿ ರಣಗಲ್, ಬಾಕ್ಸ್ ಆಫೀಸ್ನಲ್ಲಿ ಅಕ್ಷರಶಃ ರಣಾರ್ಭಟ ಶುರುವಿಟ್ಟಿದೆ. ಶಿವಣ್ಣ ಕರಿಯರ್ನ ಮೈಲಿಗಲ್ಲು ಸಿನಿಮಾಗಳಲ್ಲಿ ಇದು ಕೂಡ ಒಂದಾಗಲಿದ್ದು, ವೇದ ಬಳಿಕ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್ನಡಿ ಗೀತಾ ಶಿವರಾಜ್ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕರ್ನಾಟಕದಲ್ಲಿ ಮುಂಜಾನೆ 6 ಗಂಟೆಯಿಂದಲೇ ಸ್ಪೆಷಲ್ ಶೋಗಳು ಆರಂಭವಾಗಿದ್ದವು. ರಿಲೀಸ್ ದಿನ ನ.15ರ ಶುಕ್ರವಾರ ಆನ್ಲೈನ್ ಮೂಲಕ ಬರೋಬ್ಬರಿ 47 ಸಾವಿರ ಟಿಕೆಟ್ಸ್ ಸೋಲ್ಡ್ ಔಟ್ ಆಗಿತ್ತು. ಮೊದಲ ದಿನವೇ ಕೋಟಿ ಕೋಟಿ ಲೂಟಿ ಹೊಡೆದಿರೋ ಭೈರತಿ ರಣಗಲ್, ನವೆಂಬರ್ 16ರ ಶನಿವಾರದಂದು ಕೂಡ ಅದೇ ನಾಗಾಲೋಟ ಮುಂದುವರೆಸಿದ್ದಾರೆ.
ಇಂದು ಬರೀ ಆನ್ಲೈನ್ ಟಿಕೆಟ್ಸ್ ನಿನ್ನೆಗಿಂತಲೂ ಜಾಸ್ತಿ ಸೋಲ್ಡ್ ಔಟ್ ಆಗಿವೆ. ಬರೋಬ್ಬರಿ 50 ಸಾವಿರ ಟಿಕೆಟ್ಸ್ ಮಾರಾಟವಾಗಿರೋದ್ರಿಂದ ಇಂದು ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸ್ತಿದ್ದಾರೆ ಸ್ಯಾಂಡಲ್ವುಡ್ ಕಿಂಗ್. ಭೀಮ, ಕೃಷ್ಣಂ ಪ್ರಣಯಸಖಿ ಹಾಗೂ ಬಘೀರ ಚಿತ್ರಗಳಿಂದ ಚೇತರಿಸಿಕೊಂಡಿದ್ದ ಚಂದನವನಕ್ಕೆ ಮತ್ತೊಂದು ಮೈಲಿಗಲ್ಲಾಗ್ತಿದೆ ಭೈರತಿ ರಣಗಲ್.
ಶಿವಣ್ಣನ ಸೈಲೆನ್ಸ್, ಲಾಂಗ್ ಹಿಡಿದಾಗಿನ ವೈಲೆನ್ಸ್, ಉದ್ದೇಶಕ್ಕಾಗಿ ಹೋರಾಡುವ ಕಿಚ್ಚು, ಕತ್ತಿಗಿಂತ ಹರಿತವಾದ ಇಂಟೆನ್ಸ್ ಡೈಲಾಗ್ಸ್, ಬೊಂಬಾಟ್ ಮೇಕಿಂಗ್, ನವೀನ್ ಸಿನಿಮಾಟೋಗ್ರಫಿ, ಬಸ್ರೂರು ಮ್ಯೂಸಿಕ್ ಎಲ್ಲವೂ ಚಿತ್ರಕ್ಕೆ ಪ್ಲಸ್ ಆಗಿದೆ. ಎಲ್ಲೆಡೆ ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಭೈರತಿ ರಣಗಲ್ಗೆ ಪ್ರಶಂಸೆಗಳ ಮಹಾಪೂರವೇ ಹರಿದುಬರ್ತಿದೆ. ಅದ್ರಲ್ಲೂ ಮೇಕಿಂಗ್ ಹಾಗೂ ವಯಸ್ಸಿಗೆ ತಕ್ಕನಾದ ಪಾತ್ರ ಮಾಡಿರೋ ಶಿವಣ್ಣನಿಗೆ ಅಭಿಮಾನಿ ದೇವರುಗಳ ಜೊತೆ ಪ್ರೇಕ್ಷಕಪ್ರಭುಗಳು ಕೂಡ ಬಹುಪರಾಕ್ ಹೇಳ್ತಿದ್ದಾರೆ. ಸದ್ಯ ಅನಾರೋಗ್ಯದ ನಡುವೆ ಮಾಣಸಿಕವಾಗಿ ಕೊಂಚ ಕುಗ್ಗಿರೋ ಶಿವಣ್ಣನಿಗೆ ಭೈರತಿ ರಣಗಲ್ ಚಿತ್ರದ ಸಕ್ಸಸ್ ಬೂಸ್ಟರ್ ಡೋಸ್ ನೀಡಿದಂತಾಗಿದೆ. ಮಾಸ್ ಮತ್ತು ಕ್ಲಾಸ್ ಆಡಿಯೆನ್ಸ್ ಜೊತೆ ಫ್ಯಾಮಿಲಿ ಆಡಿಯೆನ್ಸ್ನ ಕೂಡ ಸೆಳೆಯುತ್ತಿರೋ ಭೈರತಿ ರಣಗಲ್, ಮಫ್ತಿ ಸೀಕ್ವೆಲ್ ಬರೋ ಮುನ್ಸೂಚನೆ ಕೂಡ ನೀಡಿದೆ.