ರಾಯಚೂರು: ಪಿಡಿಒ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆ ವೇಳೆ ಭಾರೀ ಹೈಡ್ರಾಮಾ ನಡೆದಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯ್ಕೆಗೆ ರಾಯಚೂರಿನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಸಾಮಾನ್ಯ ಪ್ರಶ್ನೆ ಪತ್ರಿಕೆ ಪರೀಕ್ಷೆಯಲ್ಲಿ ಕೆಪಿಎಸ್ಸಿ ಒಂದು ಕೋಣೆಗೆ 24 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು.
24 ಪ್ರಶ್ನೆ ಪತ್ರಿಕೆ ಬದಲು ಕೇವಲ 12 ಪ್ರಶ್ನೆ ಪತ್ರಿಕೆ ಕಳುಹಿಸಿದ ಕೆಪಿಎಸ್ಸಿಯ ಈ ಎಡವಟ್ಟಿನಿಂದಾಗಿ 12 ಪ್ರಶ್ನೆ ಪತ್ರಿಕೆಗಳಿದ್ರೂ ಒಂದೇ ಕೋಣೆಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ನರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿ ಪ್ರತಿಭಟನೆ ಮಾಡಿದ್ದಾರೆ.
ರಾಯಚೂರಿನ ಸಿಂಧನೂರು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಎಕ್ಸಾಂ ಸೆಂಟರ್ಗೆ ಬೀದರ್, ಕಲಬುರಗಿ ಹಾಗೂ ಯಾದಗಿರಿಯಿಂದ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 840ಕ್ಕೂ ಅಧಿಕ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ರು. ಕುಷ್ಟಗಿ – ಸಿಂಧನೂರು ರಸ್ತೆ ಬಂದ್ ಮಾಡಿ ಅಭ್ಯರ್ಥಿಗಳು ಕೆಪಿಎಸ್ಸಿ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸಿಂಧನೂರು ತಹಸೀಲ್ದಾರ್ ಅರುಣ್ ಕುಮಾರ್ ಭೇಟಿ ನೀಡಿ ಅಭ್ಯರ್ಥಿಗಳ ಸಮಸ್ಯೆ ಆಲಿಸಿದ್ರು. ಈ ವೇಳೆ ಸಿಂಧನೂರು ಪೊಲೀಸರು ಹಾಗೂ ತಹಸೀಲ್ದಾರರು ಅಭ್ಯರ್ಥಿಗಳ ಮನವೊಲಿಸಲು ಪರಿಸ್ಥಿತಿ ನಿಯಂತ್ರಿಸಿದರು.