ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ (ನೈಜೀರಿಯಾ, ಬ್ರೆಜಿಲ್ ಮತ್ತು ಗಯಾನ) ಪ್ರವಾಸ ಕೈಗೊಂಡಿದ್ದು, ಭಾನುವಾರ ನೈಜೀರಿಯಾ ತಲುಪಿದ್ದಾರೆ. ಇದರೊಂದಿಗೆ ಭಾರತದ ಪ್ರಧಾನಿಯೊಬ್ಬರು 17 ವರ್ಷಗಳ ಬಳಿಕ ಈ ದೇಶಕ್ಕೆ ಭೇಟಿಕೊಟ್ಟಂತಾಗಿದೆ.
ಮೋದಿ ಅವರು ನೈಜೀರಿಯಾ ತಲುಪಿರುವ ಸುದ್ದಿಯನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್ ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿ ಅವರು ನೈಜೀರಿಯಾದ ಅಬುಜಾ ನಗರ ತಲುಪಿದ್ದಾರೆ. ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನೀಸಮ್ ಎಜೆನ್ನೊ ವೈಕ್ ಅವರು ‘ನಗರಕ್ಕೆ ಕೀಲಿಕೈ’ ನೀಡುವ ಮೂಲಕ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ಕೀಲಿಕೈ ನೈಜೀರಿಯನ್ನರು ಪ್ರಧಾನಿ ಅವರ ಮೇಲೆ ಇಟ್ಟಿರುವ ನಂಬಿಕೆ ಮತ್ತು ಗೌರವದ ಸಂಕೇತವಾಗಿದೆ’ ಎಂದು ತಿಳಿಸಿದ್ದಾರೆ.
ಪಶ್ಚಿಮ ಆಫ್ರಿಕಾ ಪ್ರದೇಶಕ್ಕೆ ಮೋದಿ ಅವರು ಕೈಗೊಂಡ ಮೊದಲ ಭೇಟಿ ಇದಾಗಿದೆ. ನೈಜೀರಿಯಾ ಬಳಿಕ ಬ್ರೆಜಿಲ್ಗೆ ತೆರಳಲಿರುವ ಮೋದಿ, ರಿಯೊ ಡಿ ಜನೈರೊದಲ್ಲಿ ನವೆಂಬರ್ 18-19ರಂದು ನಡೆಯಲಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮೋದಿ ಅವರು ನವೆಂಬರ್ 19ರಿಂದ 21ರ ವರೆಗೆ ಗಯಾನ ಪ್ರವಾಸದಲ್ಲಿರಲಿದ್ದಾರೆ. ಇದರೊಂದಿಗೆ ಭಾರತದ ಪ್ರಧಾನಿಯೊಬ್ಬರು ಗಯಾನಕ್ಕೆ 50 ವರ್ಷಗಳ ಬಳಿಕ ಭೇಟಿ ನೀಡಿದಂತಾಗಲಿದೆ.